
ಕಲಬುರಗಿ,ಡಿ.10-ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಮಿಲೇನಿಯಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಅಂತರ ಶಾಲಾ ಮಟ್ಟದ ಕ್ರೀಡಾಕೂಟವನ್ನು ಡಿ.8 ರಂದು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಡೈಯಟ್‍ನ ಉಪನಿರ್ದೇಶಕ (ಅಭಿವೃದ್ಧಿ) ಬಸವರಾಜ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪಾರಿವಾಳ ಹಾರಿಬಿಡುವ ಮೂಲಕ ಮತ್ತು ಸಸಿಗೆ ನೀರೆರೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಡೈಯಟ್‍ನ ಉಪನಿರ್ದೇಶಕ (ಅಭಿವೃದ್ಧಿ) ಬಸವರಾಜ ಶೆಟ್ಟಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ ಈ ಭಾಗದಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಸಂಸ್ಥೆ ಬೆಳ್ಳಿ ಹಬ್ಬದ ಪ್ರಯುಕ್ತ ಅಂತರ ಶಾಲಾ ಕ್ರೀಡಾಕೂಟ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇನ್ನೋರ್ವ ಅತಿಥಿ ರಾಜಶೇಖರ ಗೋನಾಯಕ ಅವರು ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿರುವುದಕ್ಕೆ ಸಂಸ್ಥೆಗೆ ಅಭಿನಂದಿಸಿದರು.
ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎನ್.ಪಾಟೀಲ, ಕಾರ್ಯದರ್ಶಿ ಅರುಣಕುಮಾರ ಪಾಟೀಲ, ಸದಸ್ಯರಾದ ಶಿವಲಿಂಗಪ್ಪ ಕಲಶೆಟ್ಟಿ, ಎಸ್.ಡಿ.ಪಾಟೀಲ, ಎಸ್.ಎಂ.ಪಾಟೀಲ, ಸುಭಾಷಚಂದ್ರ ಗಾದಾ, ಸುರೇಶಕುಮಾರ, ಗುರುಬಸಪ್ಪ ಪಾಟೀಲ, ದೇಶಮುಖ ಹಂಚೆ, ಸಂಗಮೇಶ ಹಿರೇಮಠ, ವಿನೋದ ಸಿಂಗ್ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಾದ ನಾಗೇಂದ್ರಪ್ಪ ವಂದಿಸಿದರು.

























