
ಕಲಬುರಗಿ.ಅ.18: ವ್ಯಕ್ತಿಯೊಬ್ಬ ಮಹಿಳಾ ಪಿಎಸ್‍ಐಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ್ದರಿಂದ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಜವಳಕರ್ ಅವರು ಅಪರಾಧಿಗೆ 15 ದಿನ ಸಾದಾ ಜೈಲು ಶಿಕ್ಷೆ ಮತ್ತು ಒಟ್ಟು 14,500 ರೂ ದಂಡ ವಿಧಿಸಿದ್ದಾರೆ ತೀರ್ಪು ನೀಡಿದ್ದಾರೆ.
ಚಿಂಚೋಳಿಯ ಮಂಜುನಾಥ ಬಸವರಾಜ ಕೊರವಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಕಳೆದ 2017 ರ ಜನವರಿ 22 ರಂದು ರಟಕಲ್ ಠಾಣೆ ಪಿಎಸ್‍ಐ ಅಕ್ಕಮಹಾದೇವಿ ಅವರು ಸರಕಾರಿ ಜೀಪಿನಲ್ಲಿ ಕರ್ತವ್ಯದ ಮೇಲೆ ಮಹಾಗಾಂವ ಕಡೆಗೆ ತೆರಳುತ್ತಿದ್ದಾಗ, ಜೀಪು ತಡೆದ ಮಂಜುನಾಥ ವಾಹನ ಅಪಘಾತವೊಂದರ ವಿಷಯದಲ್ಲಿ ವಾಗ್ವಾದಕ್ಕಿಳಿದು ಪಿಎಸ್ ಐ ಅವರನ್ನು ನಿಂದಿಸಿದ್ದರು.” ಅಪಘಾತವಾದ ವಾಹನ ನನ್ನದಿದ್ದು,ನಾನು ವಾಹನ ನಿರೀಕ್ಷಕನಿದ್ದು, ನಿನಗೆ ಕಾನೂನು ಗೊತ್ತಿಲ್ಲ” ಮುಂತಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಪಾಟೀಲ ಅವರು ವಾದ ಮಂಡಿಸಿದ್ದರು.