
ಬೆಂಗಳೂರು,ಡಿ.೫- ಕೆಂಗೇರಿ ನಮ್ಮ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ದುರ್ಘಟನೆಯಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿ ಕೆಲ ಸಮಯದ ಬಳಿಕ ಎಂದಿನಂತೆ ಸಂಚಾರ ಅರಂಭಗೊಂಡಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಸಮೃದ್ಧಿನಗರದ ಶಾಂತಗೌಡ ಪೋಲಿಸ ಪಾಟೀಲ(೩೮)ಆತ್ಮಹತ್ಯೆ ಮಾಡಿಕೊಂಡವರು,ಬೆಳಿಗ್ಗೆ ೮ ರ ವೇಳೆಗೆ ಕೆಂಗೇರಿ ನಮ್ಮ ಮೆಟ್ರೋ ನಿಲ್ದಾಣಕ್ಕೆ ಬಂದ ಶಾಂತಗೌಡ ೮.೧೫ರ ಸುಮಾರಿಗೆ ರೈಲು ಬರುವುದನ್ನು ಕಾಯ್ದು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಹಳಿ ಮೇಲೆ ಜಿಗಿದಿದ್ದಾನೆ.
ತಕ್ಷಣವೇ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿ ಸ್ಥಳದಲ್ಲಿಯೇ ಮೃತಪಟ್ಟ ಶಾಂತಗೌಡನ ಮೃತದೇಹವನ್ನು ರಾಜರಾಜೇಶ್ವರಿನಗರ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ ಅನಿತಾ ಹದ್ದಣ್ಣವರ್ ತಿಳಿಸಿದ್ದಾರೆ.
ದುರ್ಘಟನೆಯಿಂದ ಮೈಸೂರು ರಸ್ತೆ ಚಲ್ಲಘಟ್ಟ ನಡುವೆ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿತ್ತು.
ಇದರಿಂದ ಮೆಟ್ರೋ ರೈಲುಗಳು ವೈಟ್‌ಫೀಲ್ಡ್‌ನಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಸಂಚರಿಸಿದವು.

ಸುದ್ದಿ ತಿಳಿದ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಸ್ಥಳಾಂತರಿಸ ಬಳಿಕ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಅರಂಭಗೊಂಡಿದೆ.
ಘಟನೆ ಸ್ಥಳಕ್ಕೆ ಮೆಟ್ರೋ ಸುರಕ್ಷತಾ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಕೆಂಗೇರಿ ನಿಲ್ದಾಣದಲ್ಲಿ ಸಂಭವಿಸಿದ ಆತ್ಮಹತ್ಯೆ ಪ್ರಯತ್ನದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡು. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ.
ಬೆಂಗಳೂರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇದೇ ಮೊದಲಲ್ಲ,ಹಿಂದೆ ಇಂಥದ್ದೇ ಹಲವು ಪ್ರಕರಣಗಳು ವರದಿಯಾಗಿವೆ. ಇದೇ ಅಕ್ಟೋಬರ್‌ನಲ್ಲಿ ವಿಧಾನಸೌಧದ ಡಿ ಗ್ರೂಪ್ ನೌಕರ ವೀರೇಶ್ (೩೫) ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿತ್ತು.


































