Home ಜಿಲ್ಲೆ ಆಯ್ಕೆ ಸಮಿತಿಗೆ ಸಿಇಓ ಅವರನ್ನೇ ಅಧ್ಯಕ್ಷರಾಗಿ ಮಾಡಿ: ಪಂಡಿತ ಚಿದ್ರಿ

ಆಯ್ಕೆ ಸಮಿತಿಗೆ ಸಿಇಓ ಅವರನ್ನೇ ಅಧ್ಯಕ್ಷರಾಗಿ ಮಾಡಿ: ಪಂಡಿತ ಚಿದ್ರಿ

ಬೀದರ: ಫೆ.೨೮:ಈ ಹಿಂದೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿಗಾಹಿಗಳ ಸಂಘ-ಸAಸ್ಥೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತಿತ್ತು. ಆದರೆ ಫೆ. ೨೩ ರಂದು ಸರ್ಕಾರವು ಕುರಿಗಾಹಿಗಳಿಗೆ ಒದಗಿಸುವ ವಿವಿಧ ಸೌಲಭ್ಯಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದರಿಂದ ಕುರಿಗಾಹಿಗಳ ಸಂಘಗಳಿಗೆ ಹಾಗೂ ಫಲಾನುಭವಿಗಳಿಗೆ ಅನ್ಯಾಯವಾಗುವ ಸಂಭವವೇ ಹೆಚ್ಚು. ಆದ್ದರಿಂದ ಅಧ್ಯಕ್ಷ ಸ್ಥಾನದಿಂದ ಶಾಸಕರನ್ನು ಕೈಬಿಡಬೇಕೆಂದು ಕುರಿ ಮತ್ತು ಮೇಕೆ ಮಹಾಮಂಡಳದ ರಾಜ್ಯ ನಿರ್ದೇಶಕ ಪಂಡಿತರಾವ ಚಿದ್ರಿ ತಿಳಿಸಿದರು.
ಈ ಕುರಿತು ಗುರುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಡಿ.ದೇವರಾಜ್ ಅರಸ್ ಅಭಿವೃದ್ಧಿ ನಿಗಮದಲ್ಲಿ ಒಟ್ಟು ೧೧ ನಿಗಮಗಳಿವೆ. ಜೊತೆಗೆ ಬಂಜಾರಾ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ ಈ ೧೫ ನಿಗಮಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ಅವರೇ ಅಧ್ಯಕ್ಷರಾಗಿದ್ದಾರೆ. ಆದರೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮಾತ್ರ ಕಳೆದ ಕೆಲವು ದಿವಸಗಳ ಹಿಂದೆ ಸರ್ಕಾರ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಶಾಸಕರು ತಮ್ಮ ಕಾರ್ಯಕರ್ತರ ಮೂಲಕ ಅಥವಾ ಮುಖಂಡರ ಮೂಲಕ ಅನ್ಯರಿಗೆ ಜವಾಬ್ದಾರಿ ಒಪ್ಪಿಸುತ್ತಾರೆ. ಹೀಗಿರುವಾಗ ನಿಜವಾದ ಕುರಿಗಾಹಿಗಳಿಗೆ, ಕುರಿಗಾಹಿ ಸಂಘ ಸಂಸ್ಥೆಗಳ ಫಲಾನುಭವಿಗಳಿಗೆ ಸೌಲಭ್ಯ ಸಿಗುವುದು ವಿರಳ. ಆದ್ದರಿಂದ ಕೂಡಲೇ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಶಾಸಕರನ್ನು ಕೈಬಿಟ್ಟು ಈ ಹಿಂದಿನAತೆ ಜಿ.ಪಂ. ಸಿಇಓ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಕುರಿಗಾಹಿಗಳಿಗೆ ಸೌಲಭ್ಯ ಒದಗಿಸಬೇಕೆಂದು ಪಂಡಿತರಾವ ಚಿದ್ರಿ ತಿಳಿಸಿದರು.
ರಾಜ್ಯದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು ೮೦೦ ಕುರಿ ಮತ್ತು ಮೇಕೆ ಸಹಕಾರ ಸಂಘಗಳಿವೆ. ಕುರಿ ಮತ್ತು ಮೇಕೆ ಮಹಾಮಂಡಳ ಅಡಿಯಲ್ಲಿ ೪೦೦ ಸಹಕಾರ ಸಂಘಗಳು ಹಾಗೂ ಶೇರುದಾರರಿದ್ದಾರೆ. ೧ ಕೋಟಿ ೫೦ ಲಕ್ಷ ಕುರಿ ಹಾಗೂ ಮೇಕೆಗಳಿವಿ. ಎರಡೂ ಸಂಘ ಸೇರಿ ೧ ಲಕ್ಷ ೨೫ ಸಾವಿರ ಸದಸ್ಯರಿದ್ದಾರೆ. ಅವುಗಳಿಗೆ ನಿಗಮದ ವತಿಯಿಂದಲೇ ಜಿ.ಪಂ. ಸಿಇಓ ಅವರ ಅಧ್ಯಕ್ಷತೆಯಲ್ಲಿ ಔಷಧ, ಶಾಮಿಯಾನ, ಬ್ಯಾಟರಿ, ಸಾಲ ಸೌಲಭ್ಯ, ಕುರಿ ಸಂಘಗಳಿಗೆ ೫ ಲಕ್ಷ ಸಹಾಯಧನ, ಕುರಿಗಾಹಿಗಳಿಗೆ ಗುರುತಿನ ಚೀಟಿ, ಸತ್ತ ಕುರಿಗಳಿಗೆ ಪರಿಹಾರವನ್ನು ಆಯಾ ಕುರಿಗಾಹಿ ಸಂಘಗಳ ಮೂಲಕ ಧೃಢೀಕರಣ ಪತ್ರ ತೆಗೆದುಕೊಂಡು ಸೌಲಭ್ಯ ನೀಡುತಿದ್ದರು. ಈ ಎಲ್ಲಾ ಮಾಹಿತಿ ಶಾಸಕರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಬಾರದೆಂಬುದು ನಮ್ಮ ಅಭಿಪ್ರಾಯ.
ಒಂದು ವೇಳೆ ಶಾಸಕರನ್ನೇ ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ಮುಂದುವರೆಸುವುದಾದರೆ ಈ ಮೇಲಿನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಶಾಸಕರು ಕುರಿಗಾಹಿ ಸಂಘಗಳಿಗೆ ಧೃಢೀಕರಣ ಪತ್ರ ತೆಗೆದುಕೊಂಡು ಸೌಲಭ್ಯಗಳನ್ನು ಒದಗಿಸಬೇಕೆಂದು ಚಿದ್ರಿ ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕುರಿಗಾಹಿಗಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕುರಿ ಮತ್ತು ಮೇಕೆ ಸಂಘಗಳ ಹಾಗೂ ಮಹಾಮಂಡಳ ಪದಾಧಿಕಾರಿಗಳ ಸಭೆ ಕರೆದು ಇದರ ಸಾಧಕ ಬಾಧಕ ಕುರಿತು ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಪಂಡಿತರಾವ ಚಿದ್ರಿ ತಿಳಿಸಿದರು.
ಕರ್ನಾಟಕ ಸಹಕಾರ ಉಣ್ಣೆ, ಕೈಮಗ್ಗ ಮತ್ತು ನೇಕಾರರ ಮಹಾಮಂಡಳ ಚಳ್ಳಕೆರೆಯ ನಿರ್ದೇಶಕ ಶಿವರಾಜ ಮಲ್ಲೇಶಿ ಮಾತನಾಡಿ ಸುಮಾರು ೭೭೭ ಜನರಿಗೆ ವರ್ಷಕ್ಕೆ ೮೦೦ ಕೋಟಿ ಅನುದಾನ ಕೊಡಬೇಕೆಂಬ ನಿಯಮವಿದೆ. ಹೀಗಾಗಿ ಬೀದರ ಜಿಲ್ಲೆಯಲ್ಲಿಯೇ ೪೦ ಕುರಿ ಸಂಘಗಳಿವೆ. ಅವುಗಳಲ್ಲಿ ೩೮ ಸಂಘಗಳಿಗೆ ಕೊಡುತ್ತಾರೆ. ಉಳಿದ ಎರಡು ಸಂಘಗಳಿಗೆ ಮುಂದಿನ ವರ್ಷ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಮಾಹಿತಿ ಕೇವಲ ಅಧಿಕಾರಿಗಳ ಹತ್ತಿರವಿದೆ. ಶಾಸಕರಿಗೆ ಈ ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ ಜವಾಬ್ದಾರಿ ನೀಡಿದಾಗ ಮಾಹಿತಿ ಕೊರತೆಯಿಂದ ನಿಜವಾದ ಕುರಿಗಾಹಿ ಫಲಾನುಭವಿಗಳಿಗೆ ಅನ್ಯಾಯವಾಗುವ ಸಂಭವವಿದೆ. ಆದ್ದರಿಂದ ಶಾಸಕರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದಾದರೆ ಸಮಗ್ರ ಮಾಹಿತಿ ಪಡೆದು ಕೇವಲ ನಿಜವಾದ ಫಲಾನುಭವಿಗಳಿಗೆ ಮಾತ್ರ ನೀಡಬೇಕೆಂದು ತಿಳಿಸಿದರು.
ಇದೇ ವೇಳೆ ಪ್ರಮುಖರಾದ ಚಂದ್ರಕಾAತ ನೇಳಗೆ, ಲೋಕೇಶ ಜಬಾಡೆ, ಅಮೃತ ವಗ್ಗೆ, ಶಾಮರಾವ ರಕ್ಷಾಳ, ಅಶೋಕ ಹಳೆಂಬುರ, ಶ್ರೀನಿವಾಸ ಮೇತ್ರೆ, ಬಾಲಾಜಿ ಜಬಾಡೆ, ನರಸಿಂಗ್ ಸೋನಾಳ, ಸಂಜುಕುಮಾರ ಅಲ್ಲೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.