
ಯಾದಗಿರಿ:ಏ.10:ರಾಜ್ಯದ ಪತ್ರಕರ್ತ ಸಮುದಾಯದ ಮಹತ್ವದ ಜಾತ್ರೆಯಾಗಿ ಪರಿಗಣಿಸಲ್ಪಡುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವು ಏಪ್ರಿಲ್ 11 ಮತ್ತು 12ರಂದು ಬೀದರ್‍ನಲ್ಲಿ ಭವ್ಯವಾಗಿ ಜರುಗಲಿದ್ದು, ಚಿಂತನೆ-ಮಂಥನ, ತಾಂತ್ರಿಕ ಚರ್ಚೆಗಳು ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ.
ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಸಮ್ಮೇಳನವು ಮಾಧ್ಯಮ ಕ್ಷೇತ್ರದ ಇಂದಿನ ಸವಾಲುಗಳು, ಭವಿಷ್ಯದ ದಿಕ್ಕುಗಳು ಹಾಗೂ ಸಮಾಜದ ಮೇಲಿನ ಹೊಣೆಗಾರಿಕೆಗಳ ಕುರಿತು ಸಮಗ್ರ ಚರ್ಚೆಗೆ ವೇದಿಕೆಯಾಗಲಿದೆ ಎಂದು ಹೇಳಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಧಾರ್ಮಿಕ ಹಾಗೂ ಚಿಂತನಾ ಕ್ಷೇತ್ರದ ಗಣ್ಯರು, ಹಿರಿಯ ಪತ್ರಕರ್ತರು ಹಾಗೂ ಸಂಘದ ಪದಾಧಿಕಾರಿಗಳು ಈ ವೇದಿಕೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ನಗರದ ಪ್ರಮುಖ ವೃತ್ತದಿಂದ ಆರಂಭವಾಗುವ ಭವ್ಯ ಮೆರವಣಿಗೆ ಕಲಾತ್ಮಕ ಪ್ರದರ್ಶನಗಳೊಂದಿಗೆ ಗಮನ ಸೆಳೆಯಲಿದ್ದು, ಪತ್ರಕರ್ತರ ಏಕತೆ ಮತ್ತು ಸಂಸ್ಕøತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿದೆ.
ಎರಡು ದಿನಗಳ ಸಮ್ಮೇಳನದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಗಳು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ, ಗಡಿ ಸಮಸ್ಯೆಗಳು, ಮಾಧ್ಯಮ-ಉದ್ಯಮ ಸಂಬಂಧ, ಮಾಹಿತಿ ಹಕ್ಕು, ಹಾಗೂ ಆಧುನಿಕ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಮತ್ತು ಡಿಜಿಟಲೀಕರಣದ ಪರಿಣಾಮಗಳ ಕುರಿತು ಗಂಭೀರ ವಿಚಾರಗೋಷ್ಠಿಗಳು ನಡೆಯಲಿವೆ.
ಈ ಚರ್ಚೆಗಳು ಕೇವಲ ವೃತ್ತಿಪರ ಬೆಳವಣಿಗೆಗೆ ಮಾತ್ರವಲ್ಲದೆ, ಸಮಾಜಮುಖಿ ಪತ್ರಿಕೋದ್ಯಮಕ್ಕೆ ದಿಕ್ಕು ತೋರಿಸುವಂತೆ ರೂಪಿಸಲಾಗಿದೆ ಎಂದು ಸಂಕೀನ್ ತಿಳಿಸಿದರು.
ಸಮ್ಮೇಳನದ ಅಂತಿಮ ದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಪತ್ರಕರ್ತರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದು ಪತ್ರಕರ್ತರ ಸೇವೆಗೆ ಸಲ್ಲುವ ಗೌರವದ ಸಂಕೇತವಾಗಲಿದೆ.
ಜಿಲ್ಲೆಯಿಂದ ನೂರಕ್ಕೂ ಅಧಿಕ ಪತ್ರಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಕೆಲವು ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸುವುದು ಯಾದಗಿರಿ ಜಿಲ್ಲೆಯ ಹೆಗ್ಗಳಿಕೆಗೆ ಕಾರಣವಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





















