ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಲುಂಬಿನಿ ಉದ್ಯಾನವನ

ಕಲಬುರಗಿ,ಆ.29-ಪರಿಸರ ಸಂರಕ್ಷಣೆ ಹಾಗೂ ಮರಗಿಡಗಳ ಬೆಳೆಸುವಿಕೆಗೆ ಸಂಬಂಧಿಸಿದಂತೆ ಹಲವಾರು ಸ್ಪೂರ್ತಿದಾಯಕ ಮತ್ತು ಅರ್ಥವತ್ತಾದ ಘೋಷಣೆಗಳಿವೆ. ಅವುಗಳನ್ನೇ ಸ್ಪೂರ್ತಿಯಾಗಿಸಿಕೊಂಡಿರುವ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪರಿಸರ ಬಗೆಗಿನ ವಿಶೇಷ ಆಸಕ್ತಿ ಹಾಗೂ ಕಾಳಜಿಯಿಂದಾಗಿ ಜಿಲ್ಲೆಯ ಸಾರ್ವಜನಿಕ ಉದ್ಯಾನವನವೊಂದು ಹಸುರಿನಿಂದ ಕಂಗೊಳಿಸುವುದರ ಜೊತೆಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹದಿನೇಳು ಎಕರೆಯಲ್ಲಿ ಉದ್ಯಾನವನ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಸುಮಾರು17 ಎಕರೆ ವಿಸ್ತಾರದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಲುಂಬಿನಿ ಉದ್ಯಾನವನ ತನ್ನ ಚಿತ್ತಾಕರ್ಷಕ ಮರಗಡಗಳಿಂದ, ಹೂ ಬಳ್ಳಿಗಳಿಂದ, ಸಣ್ಣಗೆ ಹರಿಯುವ ಝರಿಯಿಂದಾಗಿ ಜಿಲ್ಲೆಯ ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಜಿಲ್ಲೆಯಲ್ಲಿ ಹಸಿರು ಪ್ರದೇಶವನ್ನು ವಿಸ್ತರಿಸುವುದರ ಜೊತೆಗೆ ಆಕರ್ಷಕ ಉದ್ಯಾನವನ ನಿರ್ಮಾಣ ಮಾಡುವ ಕನಸಿನೊಂದಿಗೆ ಅಡಿಯಿಟ್ಟ ಸಚಿವರು ಆಯ್ಕೆ ಮಾಡಿಕೊಂಡಿದ್ದು ಗುಂಡಗುರ್ತಿ ಬಳಿಯ ಈ ಹದಿನೇಳು ಎಕರೆ ಪ್ರದೇಶದ ಕೆಂಪು ಮಿಶ್ರಿತ ಭೂಮಿಯನ್ನು.

ರೂ 2.14 ಕೋಟಿ ಅನುದಾನ ಬಳಕೆ

ಒಂದು ಸುಂದರ ಉದ್ಯಾನವನ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ತಯಾರಾದ ನೀಲಿನಕ್ಷೆಗೆ ಅಂತಿಮ ಸ್ವರೂಪ ನೀಡಿದ ಸಚಿವ ಖರ್ಗೆ, ಅದಕ್ಕೆ ಬೇಕಾಗುವ ಅನುದಾನ ಒದಗಿಸಿಕೊಟ್ಟರು. ಅರಣ್ಯ ಇಲಾಖೆಯಿಂದ ರೂ 97 ಲಕ್ಷ ಹಾಗೂ ಡಿಎಂ ಎಫ್ ನಿಂದ ರೂ 117 ಲಕ್ಷ ( ರೂ 2.14 ಕೋಟಿ) ಅನುದಾನ ಬಿಡುಗಡೆ ಮಾಡಿಸಿದ ಸಚಿವರು ಅಗತಗಯ ಸಲಹೆ ಸೂಚನೆ ನೀಡಿ ಉದ್ಯಾನವನ ನಿರ್ಮಾಣ ಹೊಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಹಿಸಿದರು.

ಎಲ್ಲಿದೆ ?

ಕಲಬುರಗಿ ನಗರದಿಂದ ಸೇಡಂ ಪಟ್ಟಣಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸುಮಾರು 25 ಕಿಮೀ ಸಾಗಿದರೆ ಉದ್ಯಾನವನ ಸಿಗುತ್ತದೆ. ಇದು ಗುಂಡುಗುರ್ತಿ ಗ್ರಾಮದ ಹತ್ತಿರದಲ್ಲಿದೆ.

ಗಟ್ಟಿನೆಲ ಹಾಗೂ ಮುರುಮ್ ಮಿಶ್ರಿತ ಮಣ್ಣು

ಉದ್ಯಾನವನಕ್ಕಾಗಿ ಆಯ್ಕೆಮಾಡಿಕೊಂಡ ಪ್ರದೇಶ ಗುಡ್ಡ ಪ್ರದೇಶದಿಂದ ಕೂಡಿದ ಗಟ್ಟಿನೆಲವಿದೆ. ಕೆಂಪು ಮಿಶ್ರಿತ ಮುರುಮ್ ಹೊಂದಿದ್ದು, ಗಿಡಮರಗಳು ಸಮೃದ್ಧವಾಗಿ ಬೆಳೆಯುವುದಕ್ಕೆ ಅನುಕೂಲಕರವಾದ ಪ್ರದೇಶವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಂಡು ಮೊದಲಿಗೆ ಸಸಿಗಳನ್ನು ನೆಡುವ ಕಾರ್ಯ ಪ್ರಾರಂಭವಾಯಿತು.

ಮಿಯಾವಾಕಿ ಅರಣ್ಯ

ಸುಮಾರು 50 ಸ್ಥಳೀಯ ಜಾತಿಯ 2,000 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಪ್ರದೇಶ ನಿರ್ಮಾಣ ಮಾಡಲಾಯಿತು.

ಏನಿದು ಮಿಯಾವಾಕಿ ಅರಣ್ಯ ?

ಸ್ಥಳೀಯವಾಗಿ ಲಭ್ಯವಿರುವ ಸಸಿಗಳನ್ನು ತೀರಾ ಹತ್ತಿರ ಒಂದರ ಪಕ್ಕ ಮತ್ತೊಂದು ಸಸಿಗಳನ್ನು ನೆಟ್ಟು ನಗರ ಮಧ್ಯೆ ಕಾಡು ಬೆಳೆಸುವ ವಿಧಾನವಾಗಿದೆ. ಜಪಾನಿನ ಪರಿಸರ ತಜ್ಞ ಅಕಿರಾ ಮಿಯಾವಾಕಿ ಅವರು ತಮ್ಮ ದೇಶದಲ್ಲಿ ಇಂತಹ ಅರಣ್ಯ ಬೆಳೆಸಿ ಯಶಸ್ವಿಯಾಗಿದ್ದರು. ಹಾಗಾಗಿ,ಈ ಮಾದರಿಯ ಅರಣ್ಯ ಬೆಳೆಸುವುದಕ್ಕೆ ಅವರ ಹೆಸರೇ ಚಾಲ್ತಿಗೆ ಬಂದಿದೆ. ಊರಿನ ನಡುವೆ ದಟ್ಟವಾದ ಕಾಡೊಂದನ್ನು ಬೆಳೆಸುವುದರ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಗಿಡಗಳನ್ನು ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಚಿಟ್ಟೆ ವನ

ಚಿಟ್ಟೆ ವನ ಈ ಉದ್ಯಾನದವನ ಪ್ರಮುಖ ಆಕರ್ಷಣೆಯಾಗಿದೆ. ಇದು ಕೂಡಾ ಚಿಟ್ಟೆ ಆಕಾರದಲ್ಲಿಯೇ ನಿರ್ಮಾಣ ಮಾಡಲಾಗಿದೆ. 51 ವಿಭಿನ್ನ ಪ್ರಭೇದದ ಚಿಟ್ಟೆಗಳನ್ನು ತಂದು ಇಲ್ಲಿ ಬಿಡಲಾಗಿದೆ. ಇಲ್ಲಿನ ಚಿಟ್ಟೆಗಳಿಗೆ ಆಹಾರ ಒದಗಿಸಲು ಹಾಗೂ ಸಂತಾನೋತ್ಪತ್ತಿ ಗೆ ಸಹಕಾರಿಯಾಗಲು ಅನುಕೂಲವಾಗುವಂತ ಹೋಸ್ಟ್ ( hosಣ) ಹಾಗೂ ನೆಕ್ಟರ್ (ಟಿeಛಿಣಚಿಡಿ) ಜಾತಿಯ ಗಿಡಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ತರಿಸಿ ನೆಡಲಾಗಿದೆ.

ಬಯಲು ರಂಗಮಂದಿರ

ಬಯಲು ಮಂದಿರ ಮಾದರಿಯ ರಂಗಸಜ್ಜಿಕೆಗಳು ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಲುಂಬಿನಿ ಉದ್ಯಾನವನದಲ್ಲಿಯೂ ಕೂಡಾ ಅದೇ ಮಾದರಿಯ ಬಯಲು ರಂಗಂದಿರ ನಿರ್ಮಾಣ ಮಾಡಲಾಗಿದ್ದು, ಸುಮಾರು 200 ಜನರು ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾನವದಲ್ಲಿ ಸಾಂಸ್ಕೃತಿಕ, ಕಲೆ, ಸಾಹಿತ್ಯ, ರಂಗ ಚಟುವಟಿಕೆಗಳಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶ ಇದು ಹೊಂದಿದೆ.

ಆಟದ ಮೈದಾನ

ರಜಾದಿನಗಳಲ್ಲಿ ಅಥವಾ ವಾರದ ಕೊನೆಯಲ್ಲಿ ಕುಟುಂಬ ವರ್ಗದವದವರೊಂದಿಗೆ ಹಾಗೂ ಮಕ್ಕಳೊಂದಿಗೆ ವಿಹರಿಸಲು ಮತ್ತು ಕಾಲಕಳೆಯಲು ಸುಸಜ್ಜಿತ ಆಟದ ಮೈದಾನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಕ್ಕಳು ಆಟವಾಡಲು ಬೇಕಾಗುವ ಜೋಕಾಲಿ, ಜಾರಬಂಡೆ ಮುಂತಾದ ಆಟೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಇದು ಚಿಣ್ಣರ ನೆಚ್ಚಿನ ಹಾಗೂ ಅತ್ಯಾಕರ್ಷಕ ಕೇಂದ್ರವಾಗಿ ಇದೀಗ ಮಾರ್ಪಟ್ಟಿದೆ.

ಕಾಂಕ್ ವುಡ್ ಬ್ರಿಜ್

ಉದ್ಯಾನವನದಲ್ಲಿ ನೈಸರ್ಗಿಕವಾಗಿ ಹರಿದು ಹೋಗುವ ಸಣ್ಣ ಝರಿಗೆ ಅಡ್ಡಲಾಗಿ ಕಾಂಕ್ ವುಡ್ ನಿಂದ ಬ್ರಿಜ್ ನಿರ್ಮಾಣ ಮಾಡಲಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಬ್ರಿಜ್ ಮೇಲೆ ನಿಂತು ಹರಿಯುವ ಝರಿಯ ನಯನಮನೋಹರ ದೃಶ್ಯ ಕಣ್ಣುತುಂಬಿಕೊಳ್ಳಬಹುದಾಗಿದೆ.

ದೀರ್ಘ ಕಾಲ ಬಾಳಿಕೆಯ ಗಿಡಗಳು

ಸುಮಾರು 2,000 ವರ್ಷ ಬಾಳಿಕೆ ಬರುವ ಬಾವೋಬಾಬ್ ( ಃಚಿobಚಿb) ಮರಗಳನ್ನು ತರಿಸಿ ಇಲ್ಲಿ ನೆಡಲಾಗಿದೆ. ಸಾಮಾನ್ಯವಾಗಿ ಈ ಮರಗಳು ಆಫ್ರಿಕಾದಲ್ಲಿ ಕಂಡುಬರುತ್ತದೆ. ಈ ಮರಗಳು ತಮ್ಮ ಕಾಂಡದೊಳಗೆ ಬೃಹತ್ ಪ್ರಮಾಣ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲವು. ಇದು ನೈಸರ್ಗಿಕ ಸಮತೋಲನದ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಆಹಾರ ನೀರು ಒದಗಿಸುತ್ತದೆ. ಈ ಮರದ ಹಣ್ಣುಗಳು ಹೇರಳವಾದ ವಿಟಮಿನ್ ಸಿ ಅಂಶವನ್ನು ಹೊಂದಿವೆ.

ಇವುಗಳ ಜೊತೆಗೆ, ಚಕ್ಕೆ ಗಿಡ ಮತ್ತು ಜತ್ರೋಫಾ ( ಎಚಿಣಡಿoಠಿhಚಿ) ಮಾದರಿ ಸೇರಿದಂತೆ 60 ಕ್ಕೂ ಹೆಚ್ಚಿನ ಜಾತಿಯ ಹೂವು ಬಿಡುವ ಗಿಡಗಳನ್ನು ನೆಡಲಾಗಿದೆ. ಸಧ್ಯ ಈ ಎಲ್ಲ ಗಿಡಗಳು ಸುಂದರ ಹೂವುಗಳಿಂದ ಕಂಗೊಳಿಸುತ್ತಿವೆ.

ವನ್ಯಜೀವಿ ಮೂರ್ತಿಗಳು

ಉದ್ಯಾನವನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಮೃಗಾಲಯದಲ್ಲಿ ಲಭ್ಯವಿರುವ ವನ್ಯಜೀವಿಗಳ ಪರಿಕಲ್ಪನೆ ಮೂಡಿಸಲು ಅದೇ ಮಾದರಿಯ ಚಿರತೆ, ಜಿಂಕೆ, ನವಿಲು, ಕರಡಿ, ಕೃಷ್ಣಮೃಗ ಸೇರಿದಂತೆ ಬೇರೆ ಬೇರೆ ಪ್ರಾಣಿಗಳ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ. ಇದು ವನ್ಯಜೀವಿಗಳ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವುದರ ಜೊತೆಗೆ ಅವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ.

ಗ್ರಂಥಾಲಯ

ವಿದ್ಯೆ, ಓದಿಗೆ ಹಾಗೂ ಜ್ಞಾನಾರ್ಜನೆಗೆ ಪುಸ್ತಕಗಳು ಅತ್ಯವಶ್ಯ ಎಂದು ಬಲವಾಗಿ ಪ್ರತಿಪಾದಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಕನಸಿನಂತೆ ಉದ್ಯಾನವನದಲ್ಲಿ ಪುಟ್ಟ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿ ಎಲ್ಲ ತರದ ಪುಸ್ತಕಗಳನ್ನು ಇರಿಸಲಾಗಿದ್ದು ಪ್ರವಾಸಿಗರು ಸುಂದರ ಪರಿಸರದ ಸವಿಯ ಜೊತೆಗೆ ಜ್ಞಾನದ ಹಸಿವನ್ನು ನೀಗಿಸಿಕೊಳ್ಳುಲು ಅನುಕೂಲವಾಗುವಂತೆ ಈ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಸಚಿವರು ತಮ್ಮ ಭೇಟಿಗೆ ಬರುವವರಿಂದ ಉಡುಗೊರೆಯಾಗಿ ಪಡೆದ ಪುಸ್ತಕಗಳನ್ನು ಇಲ್ಲಿಯೇ ನೀಡಿದ್ದಾರೆ.

ಮೂಲಭೂತ ಸೌಲಭ್ಯ

ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕುಳಿತು ಊಟ ಮಾಡಲು ವಿಶಾಲವಾದ ಜಾಗವನ್ನು ನಿರ್ಮಾಣ ಮಾಡಲಾಗಿದೆ. ಊಟ ತಿಂಡಿಗೆ ನಿಗದಿತ ಜಾಗ ಒದಗಿಸಿ ಶುಚಿತ್ವ ಕಾಪಾಡುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಶುದ್ಧ ಕುಡಿಯುವ ನೀರು, ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

………..

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವಾರು ಸ್ಪೂರ್ತಿದಾಯಕ ಘೋಷಣೆಗಳಿವೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದ ಜೊತೆಗೆ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಚಿಟ್ಟೆ ಪಾರ್ಕ್, ಗ್ರಂಥಾಲಯ, ವಿಭಿನ್ನ ಬಗೆಯ ಮರಗಿಡಗಳು, ಹೂವುಗಳು ಇತ್ಯಾದಿ ಪ್ರವಾಸಿಗರ ಮನಸೆಳೆಯುತ್ತವೆ. ಸುಸಜ್ಜಿತ ಹಾಗೂ ಸುಂದರ ಉದ್ಯಾನವನ ನಿರ್ಮಾಣದ ಕನಸು ನನಸಾಗಿದೆ. ಸಾರ್ವಜನಿಕರು ಈ ಉದ್ಯಾನವನಕ್ಕೆ ಭೇಟಿ ನೀಡಬೇಕು ಹಾಗೂ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು.

  • ಸಚಿವ ಪ್ರಿಯಾಂಕ್ ಖರ್ಗೆ.

ಲುಂಬಿನ ಉದ್ಯಾನವನಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಜಿಲ್ಲಾಡಳಿತ ಮತ್ತಷ್ಟು ಸೌಲಭ್ಯಗಳನ್ನು ಬೇಡಿಕೆಗೆ ಅನುಗುಣವಾಗಿ ಒದಗಿಸಲಿದೆ.

  • ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ.

ಲುಂಬಿನಿ ಉದ್ಯಾನವನಕ್ಕೆ ಪ್ರತಿನಿತ್ಯ ಸುಮಾರು 100 ಕ್ಕೂ ಅಧಿಕ ಪ್ರವಾಸಿಗರು/ ವೀಕ್ಷಕರು ಆಗಮಿಸಿ ಇಲ್ಲಿನ ಪರಿಸರವನ್ನು ಆಸ್ವಾದಿಸುತ್ತಿದ್ದಾರೆ. ರಜಾ ದಿನಗಳಲ್ಲಿ ಹಾಗೂ ವಾರದ ಕೊನೆಯಲ್ಲಿ ಈ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

  • ಸುಮೀತ್ ಪಾಟೀಲ್, ಡಿಎಫ್ ಓ, ಕಲಬುರಗಿ