Home ಮುಖಪುಟ ಸುದ್ದಿ ಎಲ್‌ಪಿಜಿ ಕೊರತೆ: ಸೌದೆ ಒಲೆಗೆ ಹೋಟೆಲ್‌ಗಳ ಮೊರೆ

ಎಲ್‌ಪಿಜಿ ಕೊರತೆ: ಸೌದೆ ಒಲೆಗೆ ಹೋಟೆಲ್‌ಗಳ ಮೊರೆ

ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿರುವ ಹಿನ್ನೆಲೆ ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಸೇರಿದ ಮೀನುಗಾರರ ಹೋಟೆಲ್‌ನಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸುತ್ತಿರುವ ಅಡುಗೆ ಭಟ್ಟರು.

ಬೆಂಗಳೂರು, ಮಾ. ೧೨- ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನಲೆಯಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ದಿನದಿಂದ ದಿನಕ್ಕೆ ಕೊರತೆ ತೀವ್ರವಾಗಿದೆ. ಇದರಿಂದ ಹೋಟೆಲ್, ಕೇಟರಿಂಗ್, ಮದುವೆ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ. ಬೆಂಗಳೂರಿನ ಕೆಲವೆಡೆ ಹೋಟೆಲ್‌ಗಳು ಮತ್ತು ಬೇಕರಿ ಮಾಲೀಕರು ಅಡುಗೆ ತಯಾರಿಸಲು ಸೌದೆ ಒಲೆಗೆ ಮೊರೆ ಹೋಗಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿರುವುದರಿಂದ ದುಡ್ಡು ಕೊಟ್ಟರೂ ಸಿಲಿಂಡರ್‌ಗಳು ಸಿಗದ ಪರಿಸ್ಥಿತಿ ಎದುರಾಗಿದೆ. ಅಡುಗೆ ಅನಿಲ ಪೂರೈಕೆಯಾಗದೆ ಹೋಟೆಲ್ ಉದ್ಯಮ ಕಂಗಾಲಾಗಿದೆ. ಸಿಲಿಂಡರ್‌ಗಳು ಇಲ್ಲದೆ ರಾಜ್ಯದ ಹಲವೆಡೆ ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿ ಎದುರಾಗಿದ್ದು ಪರಿಸ್ಥಿತಿ ಬಿಗಾಡಾಯಿಸುವ ಹಂತ ತಲುಪಿದೆ. ಹಣ ನೀಡಿದರೂ ಸಿಲಿಂಡರ್ ಗಳು ದೊರೆಯುತ್ತಿಲ್ಲ.


ಈಗ ಮದುವೆ ಸುಗ್ಗಿಯಾಗಿರುವುದರಿಂದ ತಿಂಗಳುಗಳ ಮುಂಚಿತವಾಗಿಯೇ ಕಲ್ಯಾಣ ಮಂಟಪ ಬುಕ್ ಮಾಡಿದ್ದರೂ ಸಿಲಿಂಡರ್ ದೊರೆಯದ ಕಾರಣ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಿಲಿಂಡರ್ ಸರಬರಾಜು ಮಾಡುವಂತೆ ಹೋಟೆಲ್, ಕಲ್ಯಾಣ ಮಂಟಪ ಮಾಲೀಕರು, ಕೇಟರಿಂಗ್ ನಡೆಸುವವರು ಗ್ಯಾಸ್ ಏಜೆನ್ಸಿ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದಾರೆ.


ಕೇಂದ್ರ ಸರ್ಕಾರ ವಾಣಿಜ್ಯ ಎಲ್‌ಪಿಜಿ ಪೂರೈಕೆಗೆ ಹಲವು ಕ್ರಮ ಕೈಗೊಂಡಿದ್ದರೂ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕಂಡು ಬರುತ್ತಿಲ್ಲ. ಕೆಲವೊಂದು ಸಣ್ಣ ಪುಟ್ಟ ಹೋಟೆಲ್ ಮತ್ತು ಬೇಕರಿ ಅಂಗಡಿಗಳ ಮಾಲೀಕರು ಸೌದೆ ಒಲೆಗೆ ಮೊರೆ ಹೋಗಿದ್ದಾರೆ. ಕೆಲವೆಡೆ ಸೌದೆ ಬಳಸಿ, ಆಹಾರ ಪದಾರ್ಥಗಳನ್ನು ಸಿದ್ದಪಡಿಸಿರುವ ದೃಶ್ಯ ಕಂಡು ಬಂದಿದೆ.


ಈಗಾಗಲೇ ಬುಕ್ ಆಗಿರುವ ಮದುವೆ ಹಾಗೂ ಶುಭಾ ಸಮಾರಂಭಗಳಿಗೆ ಸೌದೆ ಬಳಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಈ ಸೌದೆ ಬಳಕೆ ಕಡಿಮೆಯಾಗಿದೆ. ಆದರೆ ಈಗ ಅಡುಗೆ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಅನ್ಯಮಾರ್ಗವಿಲ್ಲದೆ ಸೌದೆ ಒಲೆಗೆ ಮೊರೆ ಹೋಗುವಂತಾಗಿದೆ.


ಪಂಚತಾರಾ ಹೋಟೆಲ್‌ಗಳಿಗೂ ಸಿಲಿಂಡರ್ ಸರಬರಾಜಿನ ಹೊಡೆತ ತಟ್ಟಿದೆ. ಸಿಲಿಂಡರ್ ಗಳಲ್ಲದೆ ಅಡುಗೆ ಸಿದ್ಧ ಪಡಿಸಲು ಬಾಣಿಸಿಗರು ಪರದಾಡುವಂತಾಗಿದೆ.

ಪಂಚತಾರಾ ಹೋಟೆಲ್ ಗಳಲ್ಲಿ ಸೌದೆ ಒಲೆ ಬಳಸಲು ಸಾಧ್ಯವಾಗುತ್ತಿಲ್ಲ. ಸೌದೆಗಳನ್ನು ಬಳಸಿದರೆ ದಟ್ಟ ಹೊಗೆ ಆವರಿಸುತ್ತದೆ. ಹೀಗಾಗಿ ಪಂಚತಾರಾ ಹೋಟೆಲ್ ಗಳು ಅಡುಗೆಗೆ ಸೌದೆ ಬಳಸಲು ಹಿಂದೇಟು ಹಾಕುತ್ತಿವೆ.


ಪರಿಸ್ಥಿತಿ ಹೀಗೆ ಮುಂದುವರಿದರೆ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ.