Home ಜಿಲ್ಲೆ ಕಲಬುರಗಿ ಎಲ್‍ಪಿಜಿ, ಪೆಟ್ರೋಲಿಯಂ ಕೊರತೆಗೆ ಕೇಂದ್ರ ಕಾರಣ

ಎಲ್‍ಪಿಜಿ, ಪೆಟ್ರೋಲಿಯಂ ಕೊರತೆಗೆ ಕೇಂದ್ರ ಕಾರಣ

ಕಲಬುರಗಿ,ಏ.9: ದೇಶದಲ್ಲಿ ಅಡುಗೆ ಅನಿಲ, ಪೆಟ್ರೊಲ್ ಡಿಸೇಲ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಧ್ಯಪ್ರಾಚ್ಯ ಹಾಗೂ ಅರಬ್ ದೇಶಗಳಲ್ಲಿ ಯುದ್ದ ಪ್ರಾರಂಭವಾದಾಗ ಇಲ್ಲಿ ಕೇಂದ್ರ ಸರ್ಕಾರ ತಮ್ಮ ಬಳಿ ಸಾಕಷ್ಟು ಇಂಧನ ಲಭ್ಯವಿದೆ ಎಂದು ಹೇಳಿತ್ತು. ಹಾಗಾದರೆ ಅಗತ್ಯ ವಸ್ತು ಕಾಯಿದೆ ಜಾರಿ ಮಾಡಿದ್ದು ಯಾಕೆ? ಸ್ವತಃ ಮೋದಿಯವರೇ, ಕೊರೋನ ಸಮಯದಲ್ಲಿ ಎಲ್ಲರೂ ಒಗ್ಗೂಡಿ ಎದುರಿಸಿದಂತೆ ಈಗಲೂ ಯುದ್ಧದ ಸಮಸದಲ್ಲಿ ಎದರಿಸಬೇಕು ಎಂದು ಜನರಿಗೆ ಕರೆ ನೀಡಿದ್ದು ಯಾಕೆ? ಮೋದಿ ಸರ್ಕಾರದ ಆರ್ಥಿಕ ಹಾಗೂ ವಿದೇಶಾಂಗ ನೀತಿಗಳು ದೇಶದ ಜನರಿಗೆ ಕಷ್ಟ ತಂದೊಡ್ಡಿವೆ ಎಂದರು.
ವಿಶ್ವಗುರು ಎಂದು ತಮ್ಮ ಬೆನ್ನು ಚಪ್ಪಿರಿಸಿಕೊಳ್ಳುವ ಮೋದಿ, ಯುದ್ದ ನಿಲ್ಲಿಸುವ ಪ್ರಯತ್ನ ಯಾಕೆ ಮಾಡಲಿಲ್ಲ. ಹಿಂದೆ ವಿಯಟ್ನಾಂ ಯುದ್ದ ನಡೆದಾಗ, ಅಂದಿನ ಪ್ರಧಾನಿ ನೆಹರು ಮಧ್ಯಸ್ಥಿಕೆ ವಹಿಸಿದ್ದರು. ಇಸ್ರೇಲ್ ಗೆ ಹೋಗಿ ನೇತನ್ಯಾಹು ಅವರನ್ನು ತಬ್ಬಿಕೊಂಡು ಬಂದ ಮೋದಿ ಈಗ ಯಾಕೆ ಯುದ್ದ ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಅತ್ತ ಇರಾನ್ ಹಾಗೂ ಅಮೇರಿಕಾ ನಡುವೆ ಪಾಕಿಸ್ತಾನ ಮಾತುಕತೆ ನಡೆಸಿದೆ. ಮೋದಿ ಅವರ ಸ್ನೇಹಿತ ಟ್ರಂಪ್ ನಿಂದಾಗಿ ಇಂದು ಸುಂಕ ಜಾಸ್ತಿಯಾಗುತ್ತಿದೆ. ಈಗಿನ ಡೀಲ್ ಪ್ರಕಾರ ಭಾರತ ಒಪ್ಪಿಕೊಂಡರೆ ಇಲ್ಲಿ ಬೆಳೆಯುವ ರೈತರ ಬೆಳೆಗಳಿಗೆ ನಷ್ಟವಾಗುತ್ತದೆ ಎಂದರು.
ಜಿಲ್ಲೆಯಿಂದ ಅಕ್ರಮವಾಗಿ ಅಕ್ಕಿ ಮಹಾರಾಷ್ಟ್ರ ಕ್ಕೆ ಸಾಗಾಣಿಕೆಯಾಗುತ್ತಿದೆ. ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪದ ಬಗ್ಗೆ ಕೇಳಿದಾಗ ಉತ್ತರಿಸಿದ ಸಚಿವರು ಕಲಬುರಗಿ ಹಾಗೂ ಯಾದಗಿರಿಯ ಪ್ರಕರಣಗಳನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದೆ. ಉಪಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಆ ಬಗ್ಗೆ ಕ್ರಮವಹಿಸಲಾಗುವುದು ಎಂದರು.