Home ಮುಖಪುಟ ಸುದ್ದಿ ಲಾರಿ ಕಾರಿಗೆ ಡಿಕ್ಕಿ:ಗೋದಾಮಿಗೆ ಬೆಂಕಿ ಚಾಲಕ ಸಾವು

ಲಾರಿ ಕಾರಿಗೆ ಡಿಕ್ಕಿ:ಗೋದಾಮಿಗೆ ಬೆಂಕಿ ಚಾಲಕ ಸಾವು

ಬೆಂಗಳೂರು,ಮಾ.೨೭-ಇಳಿಜಾರಿನಲ್ಲಿ ಕಬ್ಬಿಣದ ಕಂಬಿ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಗುದ್ದಿದ ರಭಸಕ್ಕೆ ಗುಜರಿ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾಗಿ ಕಾರು ಚಾಲಕ ಸಜೀವ ದಹನವಾಗಿರುವ ದುರ್ಘಟನೆ ಕುರುಬರಹಳ್ಳಿ ಬಳಿ ನಡೆದಿದೆ.


ಲಾರಿ ಡಿಕ್ಕಿಯಾದ ಪರಿಣಾಮ ಕಾರೊಳಗೆ ಮಲಗಿದ್ದ ಯುವಕ ಕಲಬುರಗಿ ಮೂಲದ ಅಂಬದಾಸ್ (೨೨) ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಶರ್ಮಾಗೆ ಸಣ್ಣಪುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಆಂಧ್ರ ಪ್ರದೇಶದಿಂದ ಸುಂಕದಕಟ್ಟೆ ಕಡೆಗೆ ಕಬ್ಬಿಣ ಸರಳುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ, ಗೂಗಲ್ ಮ್ಯಾಪ್ ಮಾರ್ಗದರ್ಶನದಂತೆ ಕುರುಬರಹಳ್ಳಿ ಮಾರ್ಗವಾಗಿ ಸಾಗುತ್ತಿತ್ತು. ಆದರೆ ಈ ಮಾರ್ಗದಲ್ಲಿ ಇಳಿಜಾರು ರಸ್ತೆ ಇರುವುದರಿಂದ, ಈಗಾಗಲೇ ಓವರ್‌ಲೋಡ್ ಆಗಿದ್ದ ಲಾರಿ ನಿಯಂತ್ರಣ ತಪ್ಪಿದೆ.
ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ, ಗೂಗಲ್ ಮ್ಯಾಪ್ ನಲ್ಲಿ ಕುರುಬರಹಳ್ಳಿ ಮುಖಾಂತರ ದಾರಿ ತೋರಿಸಿತ್ತು. ಕುರುಬರಹಳ್ಳಿ ಬಳಿಯಲ್ಲಿ ಬಹುತೇಕ ಇಳಿಜಾರು ರಸ್ತೆ ಇದೆ.


ಹೀಗಾಗಿ ಇಳಿಜಾರಿನಲ್ಲಿ ಲೋಡ್ ತುಂಬಿದ ಲಾರಿ ಕಂಟ್ರೋಲ್ ಗೆ ಸಿಗದೆ ನಿಯಂತ್ರಣ ತಪ್ಪಿ, ಮನೆ ಮುಂದೆ ನಿಲ್ಲಿಸಲಾಗಿದ್ದ ಸಿಎನ್‌ಜಿ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಯಿಂದ ಕಾರನ್ನು ಸುಮಾರು ೫೦ರಿಂದ ೧೦೦ ಮೀಟರ್ ದೂರದವರೆಗೆ ಎಳೆದೊಯ್ದಿದೆ.


ನಂತರ ಕಾರು ಸಮೀಪದಲ್ಲಿದ್ದ ಗುಜರಿ ಗೋಡೌನ್‌ಗೆ ನುಗ್ಗಿದ್ದು, ಡಿಕ್ಕಿಯಿಂದ ಉಂಟಾದ ಸ್ಪಾರ್ಕ್‌ನಿಂದ ಕಾರು ಹಾಗೂ ಸ್ಕ್ಯಾಪ್ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡು ಪರಿಣಾಮ ಕಾರು ಮತ್ತು ಲಾರಿ ಧಗಧಗನೆ ಹೊತ್ತಿ ಉರಿದಿವೆ.


ಘಟನೆಯ ಸಮಯದಲ್ಲಿ ಕಾರಿನೊಳಗೆ ಮಲಗಿದ್ದ ಕಲಬುರಗಿ ಮೂಲದ ಅಂಬದಾಸ್ ಬೆಂಕಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದು, ಐದಾರು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.


ಚಾಲಕ ಶರ್ಮಾ ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿಯಿಂದ ಜಿಗಿದು ಸಮೀಪದ ರಾಜಾಕಾಲುವೆಗೆ ಹಾರಿ ಜೀವವನ್ನು ಉಳಿಸಿಕೊಂಡಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಮೃತ ಅಂಬದಾಸ್ ಕುರುಬರಹಳ್ಳಿಯಲ್ಲೇ ಕುಟುಂಬ ಸಮೇತ ವಾಸವಾಗಿದ್ದು, ಡಿಗ್ರಿ ಪೂರ್ಣಗೊಳಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,ನಂತರ ಸ್ವಂತವಾಗಿ ಕ್ಯಾಬ್ ಖರೀದಿಸಿ ಡ್ರೈವಿಂಗ್ ವೃತ್ತಿಗೆ ಇಳಿದಿದ್ದನು.


ಲೋನ್ ಪಡೆದು ಕಾರು ಖರೀದಿಸಿದ್ದರಿಂದ ಪ್ರತಿ ತಿಂಗಳು ೨೫ ಸಾವಿರ ಇಎಮ್‌ಐ ಕಟ್ಟಬೇಕಾಗಿತ್ತು. ಹಗಲು-ರಾತ್ರಿ ದುಡಿದು ಸಾಲ ತೀರಿಸಲು ಶ್ರಮಿಸುತ್ತಿದ್ದನು.
ನಿನ್ನೆ ರಾತ್ರಿ ಕೂಡ ಒಂದು ಡ್ಯೂಟಿ ಮುಗಿಸಿ ಮತ್ತೊಂದು ಡ್ಯೂಟಿಗಾಗಿ ಕಾಯುತ್ತಾ ಕಾರಿನಲ್ಲೇ ಮಲಗಿದ್ದಾಗ ಈ ದುರ್ಘಟನೆ ನಡೆದಿದೆ. ಮನೆಯ ಬಳಿಯೇ ಕಾರು ನಿಲ್ಲಿಸಿಕೊಂಡಿದ್ದರೂ, ಏರ್ ಪೋರ್ಟ್
ಡ್ಯೂಟಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಹೊರಗೆ ಹೋಗದೆ ಮನೆಗೂ ಬಾರದೇ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ವರ್ಷವೇ ಮಗನ ಮದುವೆ ಮಾಡುವ ಯೋಜನೆ ಮಾಡಿಕೊಂಡಿದ್ದ ಕುಟುಂಬಸ್ಥರು, ಮುಂದಿನ ತಿಂಗಳು ಹೆಣ್ಣು ನೋಡಲು ಮಾತುಕತೆ ನಡೆಸಿದ್ದರು. ಆದರೆ ಈ ದುರಂತದಿಂದ ಅವರ ಎಲ್ಲಾ ಕನಸುಗಳು ಚೂರುಚೂರಾಗಿವೆ.


ಮೃತನ ತಾಯಿ ಶಾಂತಾಬಾಯಿ ದುಃಖ ತಡೆಯಲಾಗದೆ ಕಣ್ಣೀರಿಡುತ್ತಾ, “ನನ್ನ ಮಗ ಡಿಗ್ರಿ ಓದಿ ಕೆಲಸ ಮಾಡುತ್ತಿದ್ದ. ಆದರೆ ಡ್ರೈವಿಂಗ್ ಮಾಡಬೇಕು ಎಂದು ಕ್ಯಾಬ್ ತೆಗೆದುಕೊಂಡ. ಒಂದು ಡ್ಯೂಟಿ ಮುಗಿಸಿ ಇನ್ನೊಂದು ಕಾಯುತ್ತಿದ್ದ. ರಾತ್ರಿ ಒಂದು ಗಂಟೆ ಸುಮಾರಿಗೆ ಲಾರಿ ಬಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.


ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ನಿಷೇಧಿತ ಮಾರ್ಗಗಳಲ್ಲಿ ಓವರ್‌ಲೋಡ್ ವಾಹನಗಳ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.


ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.