
ಬೆಂಗಳೂರು, ಮಾ. ೬- ಪರಿಸರ ಸ್ನೇಹಿ ಧೃವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಮೇಲಿನ ಕರ್ನಾಟಕ ಮಾರಾಟ ತೆರಿಗೆ ದರವನ್ನು ಶೇ. ೫ಕ್ಕೆ ಇಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ ಈ ಸಾಲಿನ ಆಯವ್ಯಯದಲ್ಲಿ ಧೃವೀಕೃತ ನೈಸರ್ಗಿಕ ಅನಿಲ ಮೇಲಿನ ಮಾರಾಟ ತೆರಿಗೆಯನ್ನು ಶೇ. ೧೪.೩೪ ರಿಂದ ಶೇ. ೫ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಮಾಡಿದ್ದಾರೆ.
ಕೈಗಾರಿಕೆ ಮತ್ತು ಸಾರಿಗೆ ವಲಯಗಳಿಗೆ ಉತ್ತೇಜನ ನೀಡುವ ಜತೆಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಲ್‌ಎನ್‌ಜಿ ಮಾರಾಟ ತೆರಿಗೆ ದರವನ್ನು ಇಳಿಕೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಾಣಿಜ್ಯ ತೆರಿಗೆ ಸಂಗ್ರಹ ಹೆಚ್ಚಳ
೨೦೨೫-೨೬ರ ಫೆಬ್ರವರಿ ತಿಂಗಳ ವರೆಗೆ ೭೪,೧೬೦ ಕೋಟಿ ರೂ. ಜಿಎಸ್‌ಟಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೫.೮ ರಷ್ಟು ಹೆಚ್ಚಳವಾಗಿದೆ. ಮಾರಾಟ ತೆರಿಗೆ, ವೃತ್ತಿ ತೆರಿಗೆ ಒಳಗೊಂಡು ವಾಣಿಜ್ಯ ತೆರಿಗೆಯಿಂದ ಫೆಬ್ರವರಿ ೨೦೨೬ರ ವರೆಗೆ ೧೦೦೪೬೨ ಕೋಟಿ ರೂ.ಗಳು ಸ್ವೀಕೃತವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೮.೧ ರಷ್ಟು ಹೆಚ್ಚಳವಾಗಿರುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ವಾಣಿಜ್ಯ ತೆರಿಗೆಯಲ್ಲಿ ಗ್ರೂಪ್ ಎ ವೃಂದದ ಅಧಿಕಾರಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ರಚನಾತ್ಮಕ ವಸ್ತುನಿಷ್ಠ, ಪಾರದರ್ಶಕವಾದ ಕಾರ್ಯಕ್ಷಮತೆ ಆಧಾರದ ಮೇಲೆ ಮೌಲ್ಯ ಮಾಪನ ವ್ಯವಸ್ಥೆಯನ್ನು ನಿರ್ಧಿಷ್ಟ ಮಾನದಂಡಗಳ ಆಧಾರದ ಮೇಲೆ ಮಾಡಲಾಗುವುದು. ಈ ನೀತಿಯನ್ನು ಅನುಸರಿಸಿ ಇಲಾಖೆಯ ಜಂಟಿ ಆಯುಕ್ತರ ವರೆಗಿನ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
೨೦೨೬-೨೭ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣ ಗುರಿಯನ್ನು ೧,೨೫೦೦೦ ಕೋಟಿ ರೂ.ಗಳಿಗೆ ನಿಗದಿ ಮಾಡಲಾಗಿದೆ.




























