
ಕಲಬುರಗಿ:ಡಿ.5: ಭೂ ಮಂಡಲದ ಸಕಲ ಜೀವರಾಶಿಗಳಿಗೆ ಬೇಕಾದ ಆಹಾರದ ಉತ್ಪಾದನೆಗೆ ಕಾರಣವಾದ ಮಣ್ಣು ಬಹು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದೆ. ಹಸಿರು ಉಸಿರಾಗಿರುವದರಿಂದ, ಇಂತಹ ಹಸಿರು ಮತ್ತು ಉಸಿರನ್ನು ಪಡೆಯಬೇಕಾದರೆ ಮಣ್ಣು ಬೇಕು. ಮಣ್ಣಿನ ಸವಕಳಿ ತೆಡೆಗಟ್ಟಿ ಅದರ ಫಲವತ್ತತೆ ಕಾಪಾಡಬೇಕು. ಮಣ್ಣಿನಿಂದಲೇ ಬದುಕು, ಸಕಲ ಜೀವಿಗಳಿಗೆ ಆಸರೆಯಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ಮಾಡಬೂಳ ತಾಂಡಾದ ಅಶೋಕ ರಾಠೋಡ್ ಹೊಲದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಮಣ್ಣು ದಿನಾಚರಣೆ’ಯಲ್ಲಿ ಸಾಮೂಹಿಕವಾಗಿ ಮಣ್ಣಿಗೆ ಪುಷ್ಪಾರ್ಚನೆಯ ಮೂಲಕ ಗೌರವಿಸಿ, ನಂತರ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿವಿಧ ಕಾರಣಗಳಿಂದ ಮಣ್ಣು ಇಂದು ನಾಶವಾಗುತ್ತಿದೆ. ಇದನ್ನು ರಕ್ಷಣೆ ಮಾಡಿದರೆ ಮಾತ್ರ ಇಳುವರಿ ಪಡೆಯಲು ಸಾಧ್ಯ. 2-3 ಇಂಚು ಮಣ್ಣು ತಯಾರಾಗಬೇಕಾದರೆ ಸುಮಾರು ಒಂದು ಸಾವಿರ ವರ್ಷಗಳು ಬೇಕಾಗುತ್ತವೆ. ವಾಯುಗುಣದ ಅಂಶಗಳಿಂದ ಶಿಲೆಗಳ ಶಿಥಿಲೀಕರಣ ಉಂಟಾಗಿ ಮಣ್ಣು ರಚಿಸಲ್ಪಡುತ್ತದೆ. ಇದು ಭೂಮಿಯ ಮೇಲೆ ಹುಂಡಿ-ಹುಡಿಯಾಗಿ ಹರಡಿರುವ ತೆಳುವಾದ ಪದರಿನ ರೂಪದಲ್ಲಿ ಕಂಡುಬರುತ್ತದೆ. ನಮ್ಮ ದೇಶದಲ್ಲಿ ಮೆಕ್ಕಲು, ಮರಭೂಮಿ, ತೆರಾಯಿ ಅಥವಾ ಪೀಟ್, ಬೂದಿ ಬಣ್ಣದ, ಪರ್ವತ, ಕಪ್ಪು, ಕೆಂಪು, ಜಂಬಟ್ಟಿಗೆ ಮಣ್ಣುಗಳು ಕಂಡುಬರುತ್ತವೆ ಎಂದರು.
ರೈತರು ರಾಸಾಯನಿಕ ಮುಕ್ತ ಬೇಸಾಯ ಮಾಡಬೇಕಾಗಿದೆ. ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ಬಿತ್ತನೆಯನ್ನು ಮಾಡಬೇಕು. ಸಾವಯುವ ಗೊಬ್ಬರದ ಬಳಕೆ, ಬಹುಬೆಳೆ ಮತ್ತು ಬೆಳೆ ಆವರ್ತನ ಮಾಡುವುದು, ವೈಜ್ಞಾನಿಕ ಕೃಷಿ ಪದ್ದತಿಯನ್ನು ಅನುಸರಿಸಬೇಕು. ಎಲ್ಲೆಡೆ ಅರಣ್ಯಗಳನ್ನು ಬೆಳೆಸುವದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದಾಗಿದೆ. ರೈತರು ಕೃಷಿ ತಜ್ಞರು, ಪ್ರಗತಿಪರ ರೈತರ ಸಲಹೆ-ಸೂಚನೆಗಳನ್ನು ಪಡೆದು ಕೃಷಿ ಕಾರ್ಯಗಳನ್ನು ಮಾಡುವುದು ಉತ್ತಮ ಎಂದು ನುಡಿದರು.
ಕಾರ್ಯಕ್ರಮದಲ್ಲಿ ರೈತರಾದ ಅಶೋಕ ರಾಠೋಡ, ವಿಠಲ, ಪಾಂಡು,ಅವಿನಾಶ, ಸರಿತಾ ಜಿಮ, ಕಲಾವತಿ ಕೆಮ, ಸಕ್ಕುಬಾಯಿ ಡಿ. ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.































