
ಕಲಬುರಗಿ :ಮಾ.15: ಬಾಳಿನಲ್ಲಿ ಗುರು ಬೇಕೇಬೇಕು… ಗುರು ಇಲ್ಲದ ಜೀವನ ನಿರರ್ಥಕ ಎಂದವರು ಖ್ಯಾತ ಪುರಾಣಿಕರಾದ ಪಂ. ಯೋಗಿರಾಜ್ ಖಾನಾಪೂರ.
ಅವರು ತಾಲೂಕಿನ ಸುಕ್ಷೇತ್ರ ಕಡಣಿಯಲ್ಲಿ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಚಾಣದ ಶ್ರೀ ಸಿದ್ಧಲಿಂಗ ಮಹಾರಾಜ್’ರ ಪುರಾಣ 6ನೇ ದಿನದ ಕಾರ್ಯಕ್ರಮದಲ್ಲಿ ಪುರಾಣದ ಸವಿಯುಣ್ಣಿಸುತ್ತಾ, ಹುಟ್ಟಿನಿಂದ ಗುರುವಿನ ಮಹತ್ವ ಆರಂಭಗೊಂಡು ಛಟ್ಟದವರೆಗೂ ಇದ್ದೇ ಇರುತ್ತದೆ. ಮೋಕ್ಷದ ಮಾರ್ಗ ತೋರುವ ದಿವ್ಯಮೂರ್ತಿ ಗುರು ಎಂದು ಬಣ್ಣಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿನ್ಮಯಗಿರಿಯ ಶ್ರೀ ಗುರು ಮಹಾಂತೇಶ್ವರ ಮಠದ ಹಿರಿಯ ಒಡೆಯರಾದ ಪೂಜ್ಯಶ್ರೀ ಷ.ಬ್ರ. ಸಿದ್ಧರಾಮ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು.
ಜನ್ಮದಾತರಿಗೆ ಹಾಗು ಮಕ್ಕಳಿಗೆ ತುಲಾಭಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆರಂಭಿಕ ತುಲಾಭಾರ ಕು. ಲಕ್ಷ್ಮೀ ಬಸವರಾಜ ಪಾಟೀಲರ ಮೂಲಕ ಚಾಲನೆ ನೀಡಲಾಯಿತು. ಪುರಾಣದಲ್ಲಿ ಲಚ್ಯಾಣದ ಪೂಜ್ಯಶ್ರೀ ಸಿದ್ಧಲಿಂಗ ಮಹಾರಾಜ್‍ರ ಮದುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಖ್ಯಾತ ಗವಾಯಿಗಳಾದ ಸಂತೋಷ ಹರಸೂರಮಠ ಅವರ ಸಂಗೀತ ಕಾರ್ಯಕ್ರಮಕ್ಕೆ ಸುರೇಶ ಆಳಂದ ಹಾಗು ಯೋಗಿರಾಜೇಂದ್ರ ಕಡಣಿ ತಬಲಾ ಸಾಥ್ ನೀಡಿದರು. ಚನ್ನಬಸಪ್ಪ ದ್ಯಾವಪಗೋಳ ಪುರಾಣಕ್ಕೆ ಬಸವಣ್ಣನಾಗಿ ಉಪಸ್ಥಿತರಿದ್ದರು.
ನ್ಯಾಯವಾದಿ ದೇವೆಂದ್ರ ಎಕಲೂರ ಕಾರ್ಯಕ್ರಮ ನಿರೂಪಿಸಿ, ವೀರಭದ್ರಯ್ಯ ಮಠಪತಿ ಸ್ವಾಗತಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.



























