Home ಜಿಲ್ಲೆ ಪ್ರಧಾನಿ ವಿರುದ್ಧ ವಿಧಾನ ಪರಿಷತ್ ಸದಸ್ಯ ನಜೀರ ಅಹ್ಮದ ಹೇಳಿಕೆ: ಕುಡಿಗನೂರ ಖಂಡನೆ

ಪ್ರಧಾನಿ ವಿರುದ್ಧ ವಿಧಾನ ಪರಿಷತ್ ಸದಸ್ಯ ನಜೀರ ಅಹ್ಮದ ಹೇಳಿಕೆ: ಕುಡಿಗನೂರ ಖಂಡನೆ

ವಿಜಯಪುರ, ಫೆ. 4: ಸದನದ ಕಲಾಪದ ವೇಳೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ನಜೀರ್ ಅಹ್ಮದ್ ಅವರು ದೇಶದ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ‘ರಾಷ್ಟ್ರದ್ರೋಹಿ, ದೇಶದ್ರೋಹಿ’ ಎಂದು ನಿಂದನಾತ್ಮಕವಾಗಿ ಅವಹೇಳನ ಮಾಡಿರುವುದನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ಖಂಡಿಸಿದ್ದಾರೆ.
ಪ್ರಧಾನಮಂತ್ರಿಗಳನ್ನು ಇಡೀ ದೇಶ ಹಾಗೂ ಪ್ರಪಂಚದ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರಶಂಸೆ ಮಾಡುತ್ತಿರುವಾಗ ಮತ್ತು ಬಲೂಚಿಸ್ತಾನ್ ದವರು ನರೇಂದ್ರ ಮೋದಿ ಅವರಂತ ವ್ಯಕ್ತಿ ನಮ್ಮ ದೇಶಕ್ಕೂ ಬೇಕು ಅನ್ನುವಾಗ, ಎಂ. ಎಲ್. ಸಿ ನಜಿರ್ ಅಹ್ಮದ್ ಬಾಯಿಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡಿ, ಅಧಿವೇಶನದ ಮಹತ್ವದ ಸಮಯ ಸಂಪೂರ್ಣ ಹಾಳುಮಾಡಿ, ಅವರನ್ನು ಪರಿಷತ್ ಸದಸ್ಯತ್ವದಿಂದ ಸರ್ಕಾರ ಕೈಬಿಡಬೇಕು. ಮಾತನಾಡಿ ನಂತರ ಕ್ಷಮೆ ಕೇಳಲು ಮೀನಾ ಮೇಷ ಮಾಡುತ್ತಿರುವುದು ಸರಿಯೇ ? ಮೊದಲು ಬಾಯಿಗೆ ಬಂದಂಗೆ ಅನ್ನುವುದು, ಆನಂತರ ಕ್ಷಮೆ ಕೇಳುವುದು ಇದು ನಾಟಕ ಯಾರಿಗೆ ತೋರಿಸುವುದು ಎಂದು ಪ್ರಶ್ನಿಸಿಸಿದ್ದಾರೆ.
ನಜಿರ್ ಅಹಮದ್ ಅವರಿಗೆ ಇಂಥ ಹೇಳಿಕೆ ನೀಡಲು ತೆರೆಮರೆಯಲ್ಲಿ ಯಾರ ಕುಮ್ಮಕ್ಕು ಇದೆ ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.