
ಕಲಬುರಗಿ,ಮಾ.8-ಒಂದು ಸರ್ಕಾರ ಉಳಿಸುವ ಮತ್ತು ಉರುಳಿಸುವ ಕೆಲಸ ಲಂಕೇಶ್ ಪತ್ರಿಕೆ ಮಾಡುವ ಗಟ್ಟಿತನ, ಬದ್ಧತೆ ಆ ಕಾಲದಲ್ಲಿ ಲಂಕೇಶ್ ಅವರಿಗಿತ್ತು; ಅವರು ಈ ಶತಮಾನದ ಮನ್ವಂತರದ ಮಹಾನ್ ಲೇಖಕ ಪತ್ರಕರ್ತ ಆಗಿದ್ದರು ಎಂದು ವೈಚಾರಿಕ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಅಭಿಪ್ರಾಯ ಪಟ್ಟರು.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ವೇದಿಕೆ ಮತ್ತು ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪಿ.ಲಂಕೇಶ್ ಅವರ ಸಾಹಿತ್ಯ ಬದುಕು ಬರೆಹ ಪತ್ರಿಕೋದ್ಯಮ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ತಮ್ಮ ತಂದೆ ಲಿಂಗಣ್ಣ ಸತ್ಯಂಪೇಟೆ ಮತ್ತು ಲಂಕೇಶ್ ಅವರ ಒಡನಾಟ, ಅನೇಕ ಸಂದರ್ಭಗಳನ್ನು ಹೇಳುತ್ತಾ ಅವರ ಬದುಕು- ಬರಹ ಅವಲೋಕನ ಮಾಡಿದರು. ಅವರ ಕುಟುಂಬ ಮಾನವೀಯ ಚಿಂತನೆ, ಬರಹಗಳಲ್ಲಿ ಕಾಣುತ್ತೇವೆ. ಅವರೊಬ್ಬ ಶರಣಜೀವಿ ಎಂದರು.
ಆಶಯ ನುಡಿ ಆಡಿದ ಹಿರಿಯ ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನಕ್ಕೆ ತೊಡಗಬೇಕು, ಒಂದು ತಲೆಮಾರಿನ ಕಣ್ಣು ತೆರೆಸಿದ ಲಂಕೇಶರು ಬಹುಮುಖ ವ್ಯಕ್ತಿತ್ವದ ಮೇರು ಸಾಹಿತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಬಿ.ಅಸ್ಟಿಗಿಯವರು ಲಂಕೇಶ್ ಅವರ ಸಾಹಿತ್ಯ ಹಲವು ವೈಚಾರಿಕ ಚಿಂತಕರ ಪ್ರೇರಣೆಗೆ ಕಾರಣರಾದರೆ; ಪತ್ರಿಕೆಯ ಮೂಲಕ ಸಾರಾ, ಬಾನು,ಲಲಿತಾನಾಯಕ, ವೈದೇಹಿ, ಮೊದಲಾದ ಲೇಖಕರನ್ನು ಮುಖ್ಯವಾಹಿನಿಗೆ ತಂದ ಸಾಂಸ್ಕøತಿಕ ನಾಯಕರೆಂದರು.
ಚಕೋರ ವೇದಿಕೆ ಕಲಬುರ್ಗಿ ಜಿಲ್ಲಾ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಲಂಕೇಶ್ ಅವರ ಬದ್ಧತೆ, ಕಾವ್ಯ, ನಾಟಕ, ಕಥೆ, ಅನುವಾದ, ಬರಹಗಳ ಮತ್ತು ಪತ್ರಿಕೆಯ ಮೂಲಕ ಮಾಡಿದ ಸಾಧನೆ ಅವರ ಪ್ರತಿಭೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಇದಾಗಿದೆ ಎಂದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ.ಖಾಜಾವಲಿ ಸ್ವಾಗತಿಸಿದರು. ಪ್ರಾಧ್ಯಾಪಕ ಭೀಮಣ್ಣ ಎನ್.ಬೆಡಕಪಳ್ಳಿ ನಿರೂಪಿಸಿದರು. ಪ್ರಾಧ್ಯಾಪಕಿ ಭಾಗ್ಯಶ್ರೀ ನರಗುಂದ ವಂದಿಸಿದರು.ಡಾ.ಶರಣಪ್ಪ ಗುಂಡಗುರ್ತಿ,ಕುಪೇಂದ್ರ ರಾಠೋಡ, ಡಾ.ಮಲ್ಲಿಕಾರ್ಜುನ ಹೂಗಾರ, ಖುತೇಜಾ ನಸ್ರೀನ್,ಶಿಲ್ಪ ಜಗದೀಶ, ರೂಪಾ ಕುಲಕರ್ಣಿ, ರವೀಂದ್ರ, ಹೊನ್ನುರು ಸ್ವಾಮಿ, ವಿಕಾಸ,ಮೋಹನ ಬೈಲಪುತ್ರ, ಸಂದೀಪ ತಿವಾರಿ, ನಾಗಣ್ಣಗೌಡ,ಗುಂಡಪ್ಪ, ಮಹಾಂತೇಶ ಹಾಗೂ ನೂರಾರು ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.




























