Home ಜಿಲ್ಲೆ ಪಟವರ್ಧನರ ವೈಭವದ ಚಿಹ್ನೆ ಲಕ್ಕನ ಕೆರೆ ಇಂದು ದುಸ್ಥಿತಿ ! ಕಸದ ಗೂಡಾದ ಲಕ್ಕನ ಕೆರೆ

ಪಟವರ್ಧನರ ವೈಭವದ ಚಿಹ್ನೆ ಲಕ್ಕನ ಕೆರೆ ಇಂದು ದುಸ್ಥಿತಿ ! ಕಸದ ಗೂಡಾದ ಲಕ್ಕನ ಕೆರೆ

ಜಮಖಂಡಿ: ಮಾ.23: ನಗರದ ಐತಿಹಾಸಿಕ ಲಕ್ಕನ ಕೆರೆ ಇಂದು ನಿರ್ಲಕ್ಷ್ಯದಿಂದ ದುಸ್ಥಿತಿಗೆ ತಲುಪಿದ್ದು, ಅದರ ಕಾಯಕಲ್ಪ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. 19ನೇ ಶತಮಾನದಲ್ಲಿ ಪಟವರ್ಧನ ರಾಜಮನೆತನದವರಿಂದ ನಿರ್ಮಿಸಲ್ಪಟ್ಟ ಈ ಕೆರೆ ವೈಜ್ಞಾನಿಕ ತಳಹದಿಯ ಪ್ರಮುಖ ಜಲಸಂಗ್ರಹಾಲಯವಾಗಿದ್ದು, ದಶಕಗಳಿಂದ ನಗರಕ್ಕೆ ಕುಡಿಯುವ ನೀರು ಹಾಗೂ ಕೃಷಿಗೆ ಜೀವನಾಡಿಯಾಗಿ ಸೇವೆ ಸಲ್ಲಿಸಿದೆ.
ಪಟವರ್ಧನ ಸಂಸ್ಥಾನದ ಆಳ್ವಿಕೆಯಲ್ಲಿ, ವಿಶೇಷವಾಗಿ 1833ರಿಂದ 1897ರ ಅವಧಿಯಲ್ಲಿ ನಿರ್ಮಾಣಗೊಂಡ ಲಕ್ಕನ ಕೆರೆ ಮಳೆನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶದಿಂದ ರೂಪಿಸಲ್ಪಟ್ಟಿತ್ತು. ಜಮಖಂಡಿಯ ಏಳು ನೈಸರ್ಗಿಕ ಕೆರೆಗಳಲ್ಲಿ ಇದೂ ಒಂದಾಗಿದ್ದು, ಕೃಷಿಗೆ ರಾಜರು ನೀಡಿದ ಮಹತ್ವದ ಸಂಕೇತವಾಗಿದೆ.
ಅಲ್ಲದೆ ಆ ಕಾಲದಲ್ಲಿ ನಿರ್ಮಿಸಲಾದ ಆನೆಕೆರೆ, ಅಕ್ಕತಂಗೇರ ಬಾವಿ, ಸಕ್ಕರೆಬಾವಿ, ಗುಂಡಬಾವಿ, ಹೊಕ್ಕಳಬಾವಿ ಸೇರಿದಂತೆ ಅನೇಕ ಜಲಸಂಪನ್ಮೂಲಗಳು ಇಂದಿಗೂ ಜೀವಂತವಾಗಿದ್ದು, ರೈತರ ಪಾಲಿಗೆ ಜೀವನಾಡಿಗಳಾಗಿವೆ. ಲಕ್ಕನ ಕೆರೆಯಿಂದಲೇ ಸಾವಿರಾರು ಕೊಳವೆ ಬಾವಿಗಳು ಹಾಗೂ ನೂರಾರು ಬಾವಿಗಳಿಗೆ ನೀರು ಒದಗುತ್ತಿದ್ದು, ಅದರ ಮಹತ್ವ ಇನ್ನೂ ಅಚಲವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೆರೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುದು, ಸಾರ್ವಜನಿಕರು ತ್ಯಾಜ್ಯವನ್ನು ಎಸೆಯುವುದರಿಂದ ಪರಿಸರ ಮಲಿನಗೊಂಡಿರುವುದು ಗಮನಕ್ಕೆ ಬಂದಿದೆ. ನಗರಸಭೆಯ ಕಸದ ವಾಹನಕ್ಕೆ ಕಸ ನೀಡದೇ ಕೆರೆಯ ಅಕ್ಕಪಕ್ಕದಲ್ಲಿ ತ್ಯಾಜ್ಯ ಹಾಕುತ್ತಿರುವುದರಿಂದ ಕೆರೆಯ ಸ್ವಚ್ಛತೆ ಹದಗೆಟ್ಟಿದೆ. ಇದಲ್ಲದೆ, ಕೆರೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅದರ ಸೌಂದರ್ಯಕ್ಕೂ ಧಕ್ಕೆ ಉಂಟಾಗಿದೆ.
ಈ ಪರಿಸ್ಥಿತಿಗೆ ಸಾರ್ವಜನಿಕರೂ ಭಾಗಶಃ ಹೊಣೆಗಾರರಾಗಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಕೆರೆಯ ಸ್ವಚ್ಛತೆ, ಗಿಡಗಂಟಿ ತೆರವು ಹಾಗೂ ಸೌಂದರ್ಯೀಕರಣ ಕಾರ್ಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಐತಿಹಾಸಿಕ ಮಹತ್ವ ಹೊಂದಿರುವ ಲಕ್ಕನ ಕೆರೆ ಮರುಜೀವ ಪಡೆಯಲು ತುರ್ತು ಕ್ರಮ ಅಗತ್ಯವಿದ್ದು, ಅದರ ಕಾಯಕಲ್ಪದತ್ತ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವರೆಂಬ ನಿರೀಕ್ಷೆ ವ್ಯಕ್ತವಾಗಿದೆ.