ಕಾಲೇಜು ಪ್ರತಿಭೆಗಳಿಗೆ ದೈಹಿಕ ಶಿಕ್ಷಣ ಕೊರತೆ

ವಾಡಿ,ಸೆ.11: ಪದವಿಪೂರ್ವ ಶಿಕ್ಷಣ ಪಡೆಯಲು ದಾಖಲಾಗುವ ಕಾಲೇಜು ಕ್ರೀಡಾ ಪ್ರತಿಭೆಗಳು ದೈಹಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಚಿತ್ತಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಕಳವಳ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಹಾಗೂ ರಾವೂರ ಸಚ್ಚಿದಾನಂದ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾವೂರ ಗ್ರಾಮದ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಚಿತ್ತಾಪುರ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿಷಯ ಶಿಕ್ಷಣದಂತೆ ದೈಹಿಕ ಶಿಕ್ಷಣವೂ ಕೂಡ ಬೋಧನೆಯ ಭಾಗವಾಗಿದೆ. ಪ್ರೌಢ ಶಾಲೆಗಳಿಗೆ ಸರಕಾರ ದೈಹಿಕ ಶಿಕ್ಷಕರನ್ನು ನೀಡಿದೆ. ಆದರೆ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳು ದ?ಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ದೈಹಿಕ ಶಿಕ್ಷಕರ ಕೊರತೆ ನೀಗಿಸಿದರೆ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಅನುಕೂಲವಾಗುತ್ತದೆ. ಅಲ್ಲದೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗಿ ಉದ್ಯೋಗವಕಾಶ ದೊರಕಿಸಿದಂತಾಗುತ್ತದೆ. ಈ ದಿಶೆಯಲ್ಲಿ ಸರಕಾರ ಚಿಂತಿಸಿ ಮಕ್ಕಳ ಶಾರೀರಿಕ ಸದೃಢತೆಗೆ ಕಾಳಜಿ ತೋರಬೇಕು ಎಂದರು.
ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಪತ್ರಕರ್ತ ಮಡಿವಾಳಪ್ಪ ಹೇರೂರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಆಟಗಾರರಿಗೆ ಕ್ರೀಡಾ ಪ್ರಮಾಣ ವಚನ ಬೋಧಿಸಿದರು. ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ ವಲಯಗಳ ವಿವಿಧ ಕಾಲೇಜುಗಳ ಕ್ರೀಡಾ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾದ್ಯಕ್ಷ, ಕಲಬುರಗಿ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ, ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್, ಸಚ್ಚಿದಾನಂದ ಕಾಲೇಜಿನ ಪ್ರಾಚಾರ್ಯ ಕೆ.ಐ.ಬಡಿಗೇರ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ತುಮಕೂರ, ಮುಖಂಡರಾದ ಚನ್ನಣ್ಣ ಬಾಳಿ, ಡಾ.ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ದೈಹಿಕ ಶಿಕ್ಷಕರ ಸಂಘದ ತಾಲೂಕು ಪದಾಧಿಕಾರಿಗಳಾದ ದೇವಿಂದ್ರಪ್ಪ ದೊರೆ, ವೆಂಕಟೇಶ, ಹಣಮಂತ ಬಿರಾದಾರ, ಮಣಿಸಿಂಗ್ ಚವ್ಹಾಣ, ಭೋಜನಗೌಡ ಪಾಟೀಲ, ಸುರೇಶ ರಾಂಪುರೆ, ಕಸಾಪ ವಾಡಿ ಕಾರ್ಯದರ್ಶಿ ಚಂದ್ರು ಕರಣಿಕ, ಶರಣು ಜ್ಯೋತಿ, ವಿಜಯಕುಮಾರ ಭೀಮನಳ್ಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಅನಸೂಯಾ ಹೂಗಾರ ಪ್ರಾರ್ಥಿಸಿದರು. ಕೆ.ಐ. ಬಡಿಗೇರ ಸ್ವಾಗತಿಸಿದರು. ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು. ವಿವಿಧ ಕಾಲೇಜು ತಂಡದ ವಿದ್ಯಾರ್ಥಿಗಳು ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ರನ್ನಿಂಗ್, ಉದ್ದಜಿಗಿತ ಮತ್ತು ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರತಿಭೆ ಮೆರೆದರು.