ಬೀಜಿಂಗ್ ಪ್ರವೇಶಿಸಿದ ಕಿಮ್ ಜಾಂಗ್

ಬೀಜಿಂಗ್/ಸಿಯೋಲ್,ಸೆ.೨- ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ರೈಲಿನಲ್ಲಿ ಚೀನಾ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದ್ದಾರೆ.
ಅಲ್ಲಿ ಅವರು ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.


ಇದೇ ಮೊದಲ ಬಾರಿಗೆ ಕಿಮ್ ಜಾಂಗ್ ಉನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಮೆರಿಕದ ವಿರುದ್ಧ ಹೊಸ ಮೈತ್ರಿಕೂಟದ ಬಗ್ಗೆ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.


ಬೀಜಿಂಗ್‌ನಲ್ಲಿ ನಡೆಯುವ ಭವ್ಯ ಮಿಲಿಟರಿ ಮೆರವಣಿಗೆಯಲ್ಲಿ ಕಿಮ್ ಜಾಂಗ್ ಉನ್ ಭಾಗವಹಿಸಲಿದ್ದಾರೆ. ಎರಡನೇ ಮಹಾಯುದ್ಧದ ಅಂತ್ಯ ಮತ್ತು ಜಪಾನ್ ವಿರುದ್ಧ ಚೀನಾದ ವಿಜಯದ ೮೦ ನೇ ವಾರ್ಷಿಕೋತ್ಸವದಂದು ಈ ಮೆರವಣಿಗೆ ನಡೆಯುತ್ತಿದೆ. ವೇದಿಕೆಯಲ್ಲಿ ಮೂರು ದೇಶಗಳು ಒಟ್ಟಿಗೆ ಬರುತ್ತಿರುವುದು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಈ ದೇಶಗಳು ತಮ್ಮ ಸಂಬಂಧಗಳನ್ನು ಬಲಪಡಿಸುತ್ತಿವೆ ಎಂಬುದರ ನೇರ ಸಂಕೇತವೆಂದು ಪರಿಗಣಿಸಲಾಗಿದೆ.


ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ಪ್ರಕಾರ, ಕಿಮ್ ಜಾಂಗ್ ಉನ್ ಅವರ ವಿದೇಶಾಂಗ ಸಚಿವ ಚೋ ಸನ್ ಹುಯಿ ಮತ್ತು ಅನೇಕ ಹಿರಿಯ ಅಧಿಕಾರಿಗಳು ಈ ಪ್ರವಾಸದಲ್ಲಿದ್ದಾರೆ. ೨೦೧೯ ರ ನಂತರ ಕಿಮ್ ಅವರ ಮೊದಲ ಚೀನಾ ಭೇಟಿ ಇದಾಗಿದೆ. ೨೦೧೧ ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅವರು ಇಲ್ಲಿಯವರೆಗೆ ಐದು ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ.


ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ಭೇಟಿಯಾಗುವ ಸಾಧ್ಯತೆ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಚೀನಾ ತಲುಪಿದ್ದಾರೆ. ಅವರು ಶಾಂಘೈ ಸಹಕಾರ ಸಂಸ್ಥೆ ಸಭೆ ಮತ್ತು ಈ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದಾರೆ. ರಷ್ಯಾ ಸುದ್ದಿ ಸಂಸ್ಥೆಯ ಪ್ರಕಾರ, ಪುಟಿನ್ ಮತ್ತು ಕಿಮ್ ಜಾಂಗ್ ಉನ್ ನಡುವೆ ಪ್ರತ್ಯೇಕ ಸಭೆ ನಡೆಯುವ ಸಾಧ್ಯತೆಯಿದೆ. ಮೂವರು ನಾಯಕರ ತ್ರಿಪಕ್ಷೀಯ ಸಭೆಯೂ ನಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ ಆದರೂ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.


ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪದೇ ಪದೇ ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ. ಆದರೆ ೨೦೧೯ ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ನಡುವಿನ ವಿಫಲ ಸಭೆಯ ನಂತರ, ಉತ್ತರ ಕೊರಿಯಾ ಮಾತುಕತೆಯಿಂದ ದೂರ ಸರಿದಿದೆ. ಬದಲಾಗಿ, ಅದು ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಿದೆ.


ಇತ್ತೀಚಿನ ವರ್ಷಗಳಲ್ಲಿ, ಚೀನಾ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧಗಳಲ್ಲಿ ಸ್ವಲ್ಪ ಉದ್ವಿಗ್ನತೆ ಉಂಟಾಗಿದೆ. ಈ ಭೇಟಿಯ ಮೂಲಕ ಕಿಮ್ ಜಾಂಗ್ ಉನ್ ಚೀನಾದೊಂದಿಗಿನ ತನ್ನ ಸಂಬಂಧವನ್ನು ಸುಧಾರಿಸಲು ಬಯಸುತ್ತಾರೆ ಎಂದು ತಜ್ಞರು ನಂಬುತ್ತಾರೆ. ಚೀನಾ ಉತ್ತರ ಕೊರಿಯಾದ ಅತಿದೊಡ್ಡ ವ್ಯಾಪಾರ ಪಾಲುದಾರ ಮಾತ್ರವಲ್ಲದೆ ಆರ್ಥಿಕ ಸಹಾಯವನ್ನೂ ನೀಡುತ್ತದೆ.