
ಬೆಂಗಳೂರು,ಮಾ.15: ಗಂಭೀರ ಸ್ಥಿತಿಯಲ್ಲಿರುವ ಕ್ಯಾನ್ಸರ್ ರೋಗಿಗಳ ಮನೆಗೆ ವೈದ್ಯರನ್ನು ಕಳುಹಿಸಿ ಆರೈಕೆ ಮಾಡಿ ಚಿಕಿತ್ಸೆ ನೀಡುವ ವಿನೂತನ ಸೇವೆಯನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಿದೆ.
ನಿಮ್ಮ ಮನೆ, ನಿಮ್ಮ ಆಯ್ಕೆ, ನಿಮ್ಮ ಆರೈಕೆ ಘೋಷ ವಾಕ್ಯದಡಿ ಕ್ಯಾನ್ಸರ್ ಉಪಶಮನ ಆರೈಕೆ ಸೇವೆಯನ್ನು ಕಳೆದ ವಾರದಿಂದ ಜಾರಿಗೊಳಿಸಿದೆ. ಸಂಬಂಧಿಸಿದ ಸಚಿವರು ಇನ್ನಷ್ಟೇ ಅಧಿಕೃತ ಚಾಲನೆ ನೀಡಲಿದ್ದಾರೆ. ಕ್ಯಾನ್ಸರ್ ರೋಗದ ಕೊನೆಯ ಹಂತದಲ್ಲಿರುವ, ನಡೆಯಲು ಸಾಧ್ಯವಾಗದ, ಗಂಭೀರ ಅನಾರೋಗ್ಯ, ವೃದ್ಧಾಪ್ಯ ಅಥವಾ ಕುಟುಂಬಸ್ಥರ ನೆರವಿನ ಕೋರಿಕೆಯಿಂದಾಗಿ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡಲು ಸಾಧ್ಯವಾಗದ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ತಜ್ಞ ವೈದ್ಯರ ತಂಡವು ರೋಗಿಗಳ ಮನೆಗೆ ಭೇಟಿ ನೀಡಿ ಅಗತ್ಯ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ಮಾಡಲಿದೆ. ಅಂದರೆ ರೋಗ ಲಕ್ಷಣ ನಿರ್ವಹಣೆ ಒಂದೇ ಕಡೆ ಇರುವುದರಿಂದ ಅವರಿಗಾಗುವ ಗಾಯಗಳಿಗೆ ಚಿಕಿತ್ಸೆ, ಮೂಗಿನ ಮೂಲಕ ಆಹಾರ ಪೂರೈಕೆ ಸಮಾಲೋಚನೆ ಮತ್ತು ಆರೈಕೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದಲ್ಲದೆ ಆರೈಕೆಗೆ ಅಗತ್ಯವಿರುವ ಸಣ್ಣ ಪುಟ್ಟ ಉಪಕರಣಗಳನ್ನು ನೀಡಲಾಗುತ್ತಿದೆ. ಈಗಾಗಲೇ ಕ್ಯಾನ್ಸರ್ ಪೀಡಿತರ 11 ಮನೆಗಳಿಗೆ ಭೇಟಿ ನೀಡಿ ಆರೈಕೆ ಮಾಡಲಾಗಿದೆ ಎಂದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ.ಯದುರಾಜ್ ತಿಳಿಸಿದರು.
ವೈದ್ಯರ ತಂಡವು ಮನೆಗೆ ಭೇಟಿ ನೀಡುವುದಕ್ಕೂ ಮುನ್ನ ಕಿದ್ವಾಯಿಯ ಟೆಲಿ ಮೆಡಿಸಿನ್ ವಿಭಾಗದಿಂದ ನೆರವಿನ ಕರೆ ಮಾಡಿ ವೈದ್ಯರು ಬರುತ್ತಿದ್ದೇವೆ, ಅಗತ್ಯತೆ ತಿಳಿಸಿಎಂದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಮನೆ ಭೇಟಿ ಬಳಿಕವೂ ಸಹ ಫಾಲೋ ಅಪ್ ಗಾಗಿ ವೀಡಿಯೋ ಕರೆ ಮಾಡಿ ರೋಗಿಯ ಸಂಬಂಧಿಯಿಂದ ಸದ್ಯದ ಸ್ಥಿತಿಗತಿ ಬಗ್ಗೆ ವಿವರ ಕಲೆಹಾಕಿ ವೈದ್ಯರಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ವಿವರಿಸಿದರು.
ಕೊನೆಯ ಹಂತದವರೆಗೂ ಕ್ಯಾನ್ಸರ್ ರೋಗಿಯ ಮನೋಸ್ಥೈರ್ಯ ಕುಗ್ಗದಂತೆ ಘನತೆಯಿಂದಲೇ ಕೊನೆಯ ದಿನಗಳನ್ನು ಮುಂದುವರಿಸಲು ಇಂತಹ ಸೇವೆ ಅತ್ಯಂತ ಅತ್ಯಗತ್ಯವಾಗಿದೆ ಎಂದು
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ತಿಳಿಸಿದ್ದಾರೆ.



























