
ಬೆಂಗಳೂರು, ಅ. ೧೮- ತಾಳ್ಮೆಯಿಂದಿರಿ ನಿಮ್ಮ ಪಕ್ಷ ನಿಷ್ಠೆಗೆ ಫಲ ಸಿಗಲಿದೆ. ಬಿಹಾರ ಚುನಾವಣೆ ನಂತರ ಎಲ್ಲ ವಿಚಾರಗಳ ಬಗ್ಗೆ ಒಂದು ಸ್ಪಷ್ಟತೆಗೆ ಹೈಕಮಾಂಡ್ ಬರಲಿದೆ ಎಂಬ ಅಭಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು.
ಈ ಭೇಟಿ ಸಂದರ್ಭದಲ್ಲಿ ಖರ್ಗೆ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಆ ತಾಳ್ಮೆಯಿಂದಿರಿ ಪಕ್ಷ ನಿಷ್ಠೆಗೆ ಫಲ ಸಿಗಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಬಿಹಾರ ಚುನಾವಣೆ ಬಳಿಕ ಎಲ್ಲ ಕುಳಿತು ಪರಸ್ಪರ ಮಾತುಕತೆ ಮೂಲಕ ಎಲ್ಲ ವಿಚಾರಗಳ ಬಗ್ಗೆ ಒಂದು ಸ್ಪಷ್ಟತೆಗೆ ಬರೋಣ ಎಂದು ಖರ್ಗೆ ಸಲಹೆ ಮಾಡಿದರು ಎಂದು ಹೇಳಲಾಗಿದೆ.
ಸೂಕ್ತ ಸಮಯದವರೆಗೆ ತಾಳ್ಮೆಯಿಂದಿರಿ ಹೈಕಮಾಂಡ್ ಮನಸ್ಸಿನಲ್ಲೂ ಒಂದಿಷ್ಟು ವಿಚಾರಗಳಿವೆ. ಎಲ್ಲವನ್ನು ಬಿಹಾರ ಚುನಾವಣೆ ಬಳಿಕ ಮಾತನಾಡೋಣ ನಿಮ್ಮ ಪಕ್ಷ ನಿಷ್ಠೆಗೆ ತಕ್ಕ ಪ್ರತಿಫಲ ಸಿಗಲಿದೆ ಎಂಬ ಅಭಯವನ್ನು ಖರ್ಗೆ ಶಿವಕುಮಾರ್ ಭೇಟಿ ಸಮಯದಲ್ಲಿ ನೀಡಿದರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಅಧಿಕಾರ ಹಂಚಿಕೆಯ ಚರ್ಚೆಯ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಪ್ರಿಯಾಂಕ ಖರ್ಗೆ ಅವರು ಬರೆದ ಪತ್ರ ಅದಕ್ಕೆ ಪೂರಕವಾಗಿ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ನಂತರ ಬೆಳವಣಿಗೆಯ ಬಗ್ಗೆ ಈ ಇಬ್ಬರು ನಾಯಕರು ಚರ್ಚೆ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ವಿವರಿಸಿವೆ.
ಈ ವಿಚಾರಗಳ ಜೊತೆಗೆ ಬಿಹಾರ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರುಗಳಿಗೆ ಜವಾಬ್ದಾರಿಗಳನ್ನು ವಹಿಸಬೇಕು. ಯಾರನ್ನು ಯಾವ ಕಾರ್ಯಗಳಿಗೆ ನಿಯೋಜಿಸಬೇಕು, ಯಾವ ನಾಯಕರು ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕು ಎಲ್ಲದರ ಬಗ್ಗೆಯೂ ಈ ಇಬ್ಬರು ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಮಹತ್ವ ಪಡೆದ ಭೇಟಿ
ರಾಜ್ಯದಲ್ಲಿ ಅಧಿಕಾರ ಹಂಚಿಕೆ ನವೆಂಬರ್ ಕ್ರಾಂತಿಯ ಚರ್ಚೆಗಳು ನಡೆದಿರುವಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಅನಾರೋಗ್ಯ ಕಾರಣದಿಂದ ಬೆಂಗಳೂರಿನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಖರ್ಗೆ ಅವರ ಆರೋಗ್ಯ ವಿಚಾರಿಸಲು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಉಭಯ ಕುಶಲೋಪರಿ ನಂತರ ಈ ಇಬ್ಬರು ನಾಯಕರು ತಮ್ಮ ಜತೆಗಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ ರಹಸ್ಯವಾಗಿ ಸುದೀರ್ಘ ಮಾತುಕತೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರು, ಸಚಿವರು ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ. ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಪ್ರತಿಪಾದಿಸುತ್ತಾ ನವೆಂಬರ್‌ನಲ್ಲಿ ಸಂಪುಟ ಪುನಾರಚನೆ ಆಗಲಿದೆ ಎಂಬ ದಾಳವನ್ನು ಉರುಳಿಸಿರುವ ಮಧ್ಯೆಯೇ, ಡಿ.ಕೆ. ಶಿವಕುಮಾರ್ ಅವರು ಖರ್ಗೆ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿರುವುದು ನಾನಾ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಡಿಕೆಶಿ ಎಕ್ಸ್‌ನಲ್ಲಿ ಮಾಹಿತಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಖರ್ಗೆ ಅವರನ್ನು ಭೇಟಿ ಮಾಡಿದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಎಐಸಿಸಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಏನೆಲ್ಲಾ ವಿಚಾರಗಳು ಚರ್ಚೆ ಆಯಿತು ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿಲ್ಲ.