
ಬೆಂಗಳೂರು, ಮಾ. ೧೩- ನಾನು ಸುಮ್ಮನಿದ್ದೇನೆ, ಸೌಮ್ಯತೆಯಿಂದ ಇದ್ದೇನೆ ಎಂದಾಕ್ಷಣ ಅದನ್ನು ನನ್ನ ಬಲಹೀನತೆ ಎಂದು ಭಾವಿಸಬೇಡಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸದನದಲ್ಲಿಂದು ಸಚಿವರುಗಳಿಗೆ ನೇರ ಎಚ್ಚರಿಕೆ ನೀಡಿದರು.
ಸದನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಇಲಾಖೆಗಳಿಂದ ಸರಿಯಾಗಿ ಉತ್ತರ ಬರುತ್ತಿಲ್ಲ ಎಂಬ ವಿಪಕ್ಷ ಸದಸ್ಯರುಗಳ ಮಾತಿಗೆ ದನಿಗೂಡಿಸಿದ ವಿಧಾನಸಭಾಧ್ಯಕ್ಷರು, ನಾನು ದಿನವೂ ಗಮನಿಸುತ್ತಿದ್ದೇನೆ. ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳ ಪೈಕಿ ಅತಿ ಕಡಿಮೆ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತಿದೆ. ಇದು ಸರಿಯಲ್ಲ. ನಾನು ಸೌಮ್ಯತೆಯಿಂದ ಸುಮ್ಮನಿದ್ದೇನೆ ಎಂದರೆ ಅದನ್ನು ನನ್ನ ಬಲಹೀತನೆ ಎಂಬುದಾಗಿ ಭಾವಿಸಬೇಡಿ ಎಂದು ಸಚಿವರುಗಳಿಗೆ ನೇರವಾಗಿಯೇ ಹೇಳಿದರು.
ಯಾವುದೇ ಒಂದು ಪ್ರಶ್ನೆ ಕೇಳಿದ ನಂತರ ಉತ್ತರ ಕೊಡಲು ೧೦ ದಿನ ಸಮಯ ಇರುತ್ತದೆ. ೧೦ ದಿವಸದ ನಂತರವೂ ಉತ್ತರ ಬರಲ್ಲ ಎಂದರೆ ಏನರ್ಥ. ಸದಸ್ಯರು ಪ್ರಶ್ನೆ ಏಕೆ ಕೇಳಬೇಕು, ಅಧಿವೇಶನದ ಅರ್ಥ ಏನು ಬರುತ್ತದೆ. ಇದಕ್ಕೆಲ್ಲಾ ಅಂತಿಮ ಫುಲ್‌ಸ್ಟಾಪ್ ಇಡಿ. ಅಧಿಕಾರಿಗಳನ್ನು ಕರೆಸಿ ಸೂಚನೆ ಕೊಟ್ಟು ಎಲ್ಲಾ ಸದಸ್ಯರುಗಳ ಪ್ರಶ್ನೆಗಳಿಗೆ ಉತ್ತರ ಬರುವಂತೆ ನೋಡಿಕೊಳ್ಳಿ ಎಂದು ಸಚಿವರುಗಳಿಗೆ ಕಿವಿಮಾತು ಹೇಳಿದರು.
ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಸದಸ್ಯರು ದುಂಬಾಲು ಬೀಳದಿದ್ದರೆ ಒಂದು ವರ್ಷವಾದರೂ ಉತ್ತರ ಬರುವುದಿಲ್ಲ. ಹೀಗಾದರೆ ಹೇಗೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ, ಉತ್ತರ ಕೊಡಿ ಎಂದು ಸಭಾಧ್ಯಕ್ಷರು ಸಚಿವರುಗಳಿಗೆ ತಾಕೀತು ಮಾಡಿದರು.
ಸದನದಲ್ಲಿ ಇದುವರೆಗೂ ಉತ್ತರ ಬಾರದ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಸಂಬಂಧ ಉಪಸಭಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಸೋಮವಾರ ಯಾವ ಯಾವ ಇಲಾಖೆಯಿಂದ ಎಷ್ಟೆಷ್ಟು ಉತ್ತರಗಳು ಬಾಕಿ ಇವೆ ಎಂಬುದನ್ನು ಸದನದ ಮುಂದಿಡುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು.
ಸಭಾಧ್ಯಕ್ಷರ ಮಾತಿನ ಸಂದರ್ಭದಲ್ಲೇ ಮಧ್ಯೆ ಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಸದನದಲ್ಲಿ ಉತ್ತರ ಕೊಡದ ಪ್ರಶ್ನೆಗಳ ಅಧ್ಯಯನಕ್ಕೆ ಒಂದು ಉಪಸಮಿತಿಯನ್ನು ರಚಿಸಿ ಬಿಡಿ ಎಂದು ವ್ಯಂಗ್ಯವಾಗಿ ಹೇಳಿದರು.
ಸಭಾಧ್ಯಕ್ಷರು ಸರ್ಕಾರದ ವಿರುದ್ಧ ಚಾಟಿ ಬೀಸಿದ ನಂತರ ಸರ್ಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಸಭಾಧ್ಯಕ್ಷರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿಗಳು ಈಗಾಗಲೇ ಎಲ್ಲಾ ಸಚಿವರಿಗೂ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಅಪರೂಪಕ್ಕೆ ಸಭಾಧ್ಯಕ್ಷರು ಬಹಳ ಗಡುಸಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.
ಈ ಹಂತದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಯಾವ ಇಲಾಖೆಯಿಂದ ಎಷ್ಟು ಪ್ರಶ್ನೆಗಳು ಬಾಕಿ ಇವೆ ಎಂಬ ಪಟ್ಟಿಯನ್ನು ಇಡಿ. ಕೆಲ ಅಧಿಕಾರಿಗಳು ಸೋಮಾರಿಗಳಿದ್ದಾರೆ. ಸಂಜೆ ೪ ಗಂಟೆಗೆ ಗಾಲ್ಫ್ ಆಡಲು ಹೋಗುತ್ತಾರೆ. ನಾವು ಇಲ್ಲಿ ಫುಟ್ಬಾಲ್ ಆಗಿದ್ದೇವೆ. ಮಂತ್ರಿಗಳು ಉತ್ತರ ಕೊಡಲ್ಲ, ಮುಖ್ಯ ಸಚೇತಕರು ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಸರ್ಕಾರದ ಮುಖ್ಯ ಸಚೇತಕರಲ್ಲ. ಮುಖ್ಯಮಂತ್ರಿಗಳ ಮುಖ್ಯ ಸಚೇತಕರು ಎಂದು ವ್ಯಂಗ್ಯದ ದಾಟಿಯಲ್ಲಿ ಹೇಳಿ, ಈ ಸದನಕ್ಕೆ ಗೌರವ ತರುವ ರೀತಿಯಲ್ಲಿ ಸಭಾಧ್ಯಕ್ಷರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂಬ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.






























