ನಾಳೆ ಕೆಎಫ್‌ಸಿಸಿ ಚುನಾವಣೆ:ಜಯಮಾಲ-ಹರೀಶ್ ನಡುವೆ ಪೈಪೋಟಿ

ಬೆಂಗಳೂರು: ಜ.೩೦-ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ – ಫಿಲ್ಮ್ ಚೇಂಬರ್) ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವಂತೆಯೇ ಚೇಂಬರ್ ರಾಜಕೀಯ ಅಖಾಡವಾಗಿ ಪರಿವರ್ತನೆಯಾಗಿದೆ. ಜನವರಿ ೩೧ರಂದು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ವಿತರಕರ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ.

ಪ್ರತಿವರ್ಷದಂತೆ ಈ ಬಾರಿಯೂ ಫಿಲ್ಮ್ ಚೇಂಬರ್ ಚುನಾವಣೆ ಕುತೂಹಲ ಕೆರಳಿಸಿದ್ದರೂ, ಈ ಬಾರಿ ರಾಜಕೀಯ ಹಸ್ತಕ್ಷೇಪದ ಕಾರಣದಿಂದಾಗಿ ಚುನಾವಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಚುನಾವಣಾ ಕಣ ಕಾವೇರಿದ್ದು, ನೇರ ಪೈಪೋಟಿಯ ನಿರೀಕ್ಷೆ ಮೂಡಿದೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಶಾಸಕ ಮುನಿರತ್ನ ಅವರು ಸ್ಪರ್ಧೆ ಚುನಾವಣೆಗೆ ರಾಜಕೀಯ ಬಣ್ಣ ಮತ್ತಷ್ಟು ಗಟ್ಟಿಯಾಗಿತ್ತು. ಜನವರಿ ೧೫ರಂದು ಮುನಿರತ್ನ ಅವರು ಫಿಲ್ಮ್ ಚೇಂಬರ್‌ನಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಚೇಂಬರ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ನಂತರ ಅವರು ನಾಮಪತ್ರವನ್ನು ಹಿಂಪಡೆದಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಸ್ಪರ್ಧೆ ಇದೀಗ ಇಬ್ಬರ ನಡುವಿನ ನೇರ ಸಮರವಾಗಿ ಪರಿಣಮಿಸಿದೆ.

ಅಧ್ಯಕ್ಷ ಸ್ಥಾನಕ್ಕಾಗಿ ಈಗ ನಟಿ ಜಯಮಾಲ ಹಾಗೂ ಭಾ.ಮ. ಹರೀಶ್ ನಡುವೆ ಪೈಪೋಟಿ ನಡೆಯಲಿದೆ. ಈ ಹಿಂದೆ ಕೂಡ ಇವರಿಬ್ಬರ ನಡುವೆ ಸ್ಪರ್ಧೆ ನಡೆದಿದ್ದ ಹಿನ್ನೆಲೆ ಇರುವುದರಿಂದ ಈ ಬಾರಿ ಕೂಡ ಚುನಾವಣೆಯ ತೀವ್ರತೆ ಹೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಗದೊಂದಿಗೆ ಗುರುತಿಸಿಕೊಂಡಿರುವ ಜಯಮಾಲ ಅವರು ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕಣಕ್ಕಿಳಿದಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮೀಪವರ್ತಿಯಾಗಿ ಗುರುತಿಸಿಕೊಂಡಿರುವ ಭಾ.ಮ. ಹರೀಶ್ ಕೂಡ ಸ್ಪರ್ಧೆಯಲ್ಲಿ ಇದ್ದಾರೆ.

ಇದರ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಫಿಲ್ಮ್ ಚೇಂಬರ್ ಸದಸ್ಯರಾಗಿರುವುದು ಚುನಾವಣೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಇದರಿಂದಾಗಿ ಫಿಲ್ಮ್ ಚೇಂಬರ್ ಚುನಾವಣೆ ಕೇವಲ ಚಲನಚಿತ್ರೋದ್ಯಮದ ಒಳಚಟುವಟಿಕೆಯಾಗಿ ಮಾತ್ರವಲ್ಲದೆ, ರಾಜ್ಯ ರಾಜಕೀಯದ ಪ್ರತಿಬಿಂಬವಾಗಿಯೂ ಗಮನ ಸೆಳೆಯುತ್ತಿದೆ.

ಚಲನಚಿತ್ರೋದ್ಯಮದ ವಿವಿಧ ವಲಯಗಳ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಲಿರುವುದರಿಂದ, ವಿತರಕರು ಹಾಗೂ ಪ್ರದರ್ಶಕರ ವಲಯದ ಫಲಿತಾಂಶವೂ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಸ್ಪರ್ಧೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಹಣದ ಹರಿವು, ಬಣ ರಾಜಕೀಯ ಹಾಗೂ ಪ್ರಭಾವಿ ನಾಯಕರ ಬೆಂಬಲ ಚುನಾವಣೆಯ ಹಿನ್ನಲೆಯಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

ಒಟ್ಟಿನಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯು ಈ ಬಾರಿ ಕೇವಲ ಸಂಘಟನಾ ಚುನಾವಣೆ ಎಂಬ ಮಟ್ಟವನ್ನು ಮೀರಿಸಿ, ರಾಜಕೀಯ ಪ್ರತಿಷ್ಠೆಯ ಹೋರಾಟವಾಗಿ ರೂಪುಗೊಂಡಿದ್ದು, ಜನವರಿ ೩೧ರಂದು ಹೊರಬೀಳಲಿರುವ ಫಲಿತಾಂಶದತ್ತ ಚಿತ್ರೋದ್ಯಮದಷ್ಟೇ ಅಲ್ಲದೆ ರಾಜಕೀಯ ವಲಯವೂ ಕುತೂಹಲದಿಂದ ಕಾದು ನೋಡುತ್ತಿದೆ.