ಬೆಂಗಳೂರು, ಮೇ ೨೭- ರಾಜ್ಯದ ಕರಾವಳಿ ಮತ್ತು ಮಲೆನಾಡು, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಹಾಮಳೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಮತ್ತೇ ಮೂವರು ಬಲಿಯಾಗಿದ್ದಾರೆ. ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಮಳೆಯಿಂದಾಗಿ ಎರಡು ದಿನಗಳ ಕಾಲ ಅಂಗನವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಕರಾವಳಿ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಸಂಪೂರ್ಣ ಜಲಾವೃತಗೊಂಡಿದೆ.
ಮಂಗಳೂರಿನ ಕೊಡಿಯಾಲ್ ಬೈಲ್ ಭಗವತಿ ನಗರ, ದ್ವೀಪವಾಗಿ ಮಾರ್ಪಟ್ಟಿದೆ. ಧಾರಾಕಾರ ಮಳೆಗೆ ರಾಜಕಾಲುವೆಯ ನೀರು ವಸತಿ ಬಡಾವಣೆಗೆ ನುಗ್ಗಿದ ಜನರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡದಲ್ಲಿ ಭಾರೀ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದು ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕಡಬ ತಾಲ್ಲೂಕಿನ ರಾಮಕುಂಜ ಸಂಭವಿಸಿದಿ. ಅಬ್ದುಲ್ ಸಲೀಂ ಅವರು ರಾಮಕುಂಜದ ರಸ್ತೆ ಬದಿ ಮಾರುತಿ ಕಾರು ನಿಲ್ಲಿಸಿ ಹೋಗಿದ್ದರು. ಏಕಾಏಕಿ ಮಾವಿನ ಮರ ಶಬ್ಧ ಕೇಳಿ ಕಾರಿನಿಂದ ಇಳಿದು ಹೊರಹೋಗಿದ್ದಾರೆ. ಮೇ ೩೦ ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯಲ್ಲೂ ವರ್ಷಧಾರೆ ತೀವ್ರಗೊಂಡಿದೆ. ಪಡುಕೆರೆ ಸಮುದ್ರ ತೀರದಲ್ಲಿ ಭಾರಿ ಅಲೆಗಳು ಕಾಣಿಸಿಕೊಂಡಿದ್ದು ತೀರಕ್ಕೆ ಅಪ್ಪಳಿಸಿದೆ. ತೀರ ಪ್ರದೇಶದಲ್ಲಿ ವಾಸಿಸುವವರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ರಗಳೆ ಸಾಕಷ್ಟು ಸಮಸ್ಯೆಗಳನ್ನು ಉಂಟು ಹಾಕಿದೆ. ಮುಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ಎಸ್ಟೇಟ್ ತಡರಾತ್ರಿ ಕಾರ್ಮಿಕರ ಮನೆ ಮೇಲೆ ಭಾರೀ ಗಾತ್ರ ಮರ ಉರುಳಿಬಿದ್ದು ಸುನಂದ ಎಂಬ ಮಹಿಳೆ ತೀವ್ರ ಗಾಯಗೊಂಡಿದ್ದಾರೆ. ೨೦ ಮಂದಿ ಕಾರ್ಮಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಹಾಸನ ಮತ್ತೊಂದೆಡೆ ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸಕಲೇಶಪುರದ ಆನೆ ಮಹಲ್ ಬಳಿ ಹೆದ್ದಾರಿ ಸಮೀಪ ಮಣ್ಣು ಕುಸಿಯುತ್ತಿದೆ. ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ. ಸಕಲೇಶಪುರದಲ್ಲಿ ಮಲೆನಾಡು ಕೆಫೆ ಹೋಟೆಲ್‌ನ ಗೋಡೆ ಕುಸಿದು ಬಿದ್ದಿದೆ. ಆದರೆ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಶಿರಾಡಿ ಘಾಟ್ ರಸ್ತೆಯ ಎರಡು ಕಡೆ ಭೂಕುಸಿತ ಸಂಭವಿಸಿದೆ.
ಮಳೆಯಿಂದಾಗಿ ೧೦೦ ಅಡಿಗೂ ಎತ್ತರವಿರುವ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಮಹಾಮಳೆ ಅನಾಹುತ ದಿಂದಾಗಿ ಪ್ರತ್ಯೇಕ ಪ್ರಕರಣಗಳಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ.
ಹಾಸನ ತಾಲೂಕಿನ ಬಾಗೇ ಸಮೀಪ ಅರಸು ನಗರದಲ್ಲಿ ಮಳೆಯ ಕಾರಣ ಚಾಲಕನಿಗೆ ರಸ್ತೆ ಕಾಣದೆ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ಮೂಲದ ಶರತ್(೨೮), ಅಭಿಷೇಕ್(೨೭) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇತ್ತ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ವಿಷ್ಣು ಬೆಳ್ಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಉಡುಪಿ, ಉತ್ತರ ಕನ್ನಡ, ದಕ್ಷಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ೫ ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೆಆರ್‌ಎಸ್‌ಗೆ ಮೂರು ಅಡಿ ನೀರು
ಕಾವೇರಿ ಜಲಾನಯನ ಪ್ರದೇಶದಲ್ಲಿ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ಕೆಆರ್‌ಎಸ್ ನಲ್ಲಿ ೩ ಅಡಿ ನೀರು ಹೆಚ್ಚಳವಾಗಲಿದೆ. ಹಳೆ ಮೈಸೂರು ಭಾಗದ ಜೀವನಡಿಯಾಗಿರುವ ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಒಳಹರಿವು ಬರುತ್ತಿದ್ದು, ಒಂದೇ ದಿನ ಮೂರು ಅಡಿ ಭರ್ತಿಯಾಗಿದೆ.
ಎರಡು ದಿನಗಳ ಹಿಂದೆ ಜಲಾಶಯಕ್ಕೆ ೩೫೦ ಕ್ಯೂಸೆಕ್ ಒಳಹರಿವು ಇತ್ತು. ಕಾವೇರಿ ಜಲಾನಯನ ಪ್ರದೇಶಕ್ಕೆ ಉತ್ತಮ ಮಳೆಯಾಗಿ ಇಂದು ೧೯,೧೨೯ ಕ್ಯೂಸೆಕ್ ನೀರು ಬಂದಿದೆ. ಮುಂಗಾರು ಆರಂಭದಲ್ಲೇ ಮಳೆ ಸುರಿಯುತ್ತಿರುವುದರಿಂದ ರೈತ ಮುಖದಲ್ಲಿ ಮಂದಹಾಸ ಬೀರಿದೆ.