
ಬೆಂಗಳೂರು, ಜೂ.೧- ನಗರದ ರಾಮಮೂರ್ತಿ ನಗರದಲ್ಲಿ ಗ್ರಾಮ ದೇವತೆಗಳ ಊರ ಹಬ್ಬ ಹಾಗೂ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಮುನೇಶ್ವರ ಸ್ವಾಮಿ, ಮಾರಿಯಮ್ಮ, ಸಪ್ಲಮ್ಮ ದೇವಿ, ಅಣ್ಣಮ್ಮ, ಬಂಡಿ ಮಹಾಕಾಳಿ ಸೇರಿದಂತೆ ಗ್ರಾಮ ದೇವರಿಗೆ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು.
ರಾತ್ರಿ ಕರಗಮಹೋತ್ಸವ ರಾಮಮೂರ್ತಿ ನಗರದ ರಾಜ ಬೀದಿ ಸಾಗಿ ಸಂಪನ್ನಗೊಂಡಿತು. ರಾಮಮೂರ್ತಿ ನಗರದ ಬಿಬಿಎಂಪಿ ಕ್ರೀಡಾಂಗಣದಲ್ಲಿ ದೇವರುಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ನಾಳೆ ಸಂಜೆ ರಾಮಮೂರ್ತಿ ನಗರದ ರಾಜ ಬೀದಿಗಳಲ್ಲಿ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ.
ಇಂದು ರಾಮಮೂರ್ತಿ ನಗರದ ಬಿಬಿಎಂಪಿ ಆವರಣ ದಲ್ಲಿ ಗ್ರಾಮದೇವತೆಗಳಿಗೆ ಮಹಾ ಮಂಗಳಾರತಿಯನ್ನು ಶಾಸಕ ಬಿ.ಎ. ಬಸವರಾಜು ನೆರವೇರಿಸಿದರು.
ನಂತರ ಯುವ ಮುಖಂಡ ಮಹೇಶ್ .ಎಸ್. (ಮಗಿ) ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬೆಂಗಳೂರಿನ ಒತ್ತಡ ಜೀವನದಲ್ಲಿ ಈ ರೀತಿಯ ಗ್ರಾಮೀಣ ಸೊಗಡಿನ ಹಬ್ಬಗಳನ್ನು ಆಚರಿಸುವುದರಿಂದ ಒತ್ತಡ ಮುಕ್ತರಾಗಲು ಅನುಕೂಲವಾಗಲಿದೆ. ಬಂಧು- ಬಾಂಧವರು ಒಂದೆಡೆ ಸೇರಿ ಸಂಭ್ರಮಿಸಲು ಸಾಧ್ಯವಾಗಲಿದೆ. ನಮ್ಮ ಮುಂದಿನ ಪೀಳಿಗೆಗೆ ಧಾರ್ಮಿಕತೆ, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸಲು ಈ ಹಬ್ಬಗಳು ದಾರಿದೀಪವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.