ಕಲಬುರಗಿ: ನಗರ ಕೇಂದ್ರ ಗ್ರಂಥಾಲಯದಲ್ಲಿ ಶೌಚಾಲಯ ಸಮಸ್ಯೆ !

ಕಲಬುರಗಿ,ಡಿ.8-ಇಲ್ಲಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಶೌಚಾಲಯ ಸಮಸ್ಯೆ ತಲೆದೋರಿದೆ. ಪತ್ರಿಕೆ, ಪುಸ್ತಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಆಕರ ಗ್ರಂಥಗಳನ್ನು ಓದಲು ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ವೃದ್ಧರು, ಸಾರ್ವಜನಿಕರು ಅಗತ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಗ್ರಂಥಾಲಯಕ್ಕೆ ನಿತ್ಯ ಸರಿ ಸುಮಾರು 400 ರಿಂದ 500 ಜನರು ಬಂದು ಹೋಗುತ್ತಾರೆ. ಆದರೆ, ಗ್ರಂಥಾಲಯದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ತಲಾ ಒಂದೊಂದು ಶೌಚಾಲಯವಿರುವುದರಿಂದ ಮೂತ್ರ ವಿಸರ್ಜನೆಗಾಗಿ ತಾಸೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಂಥಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವೃದ್ಧರು ಇದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಗ್ರಂಥಾಲಯ ಪಕ್ಕದಲ್ಲಿ ಹೆಚ್ಚಿನ ಮೂತ್ರಾಲಯಗಳನ್ನು ನಿರ್ಮಿಸುವಂತೆ ಮುಖ್ಯ ಗ್ರಂಥಪಾಲಕರಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಕಳೆದ ಎರಡು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರೂ ಅನುದಾನವಿಲ್ಲ, ಅನುದಾನ ಬಂದ ಮೇಲೆ ಅಗತ್ಯವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಲೇ ಇದ್ದಾರೆಯೇ ಹೊರತು ಗ್ರಂಥಾಲಯದ ಪಕ್ಕದಲ್ಲಿ ಹೆಚ್ಚಿನ ಮೂತ್ರಾಲಯಗಳ ನಿರ್ಮಾಣಕ್ಕೆ ಇದುವರೆಗೂ ಮುಂದಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಬಿರಾದಾರ ದೂರಿದ್ದಾರೆ. ಮುಖ್ಯ ಗ್ರಂಥಪಾಲಕರು ಮತ್ತು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ಆಗುತ್ತಿರುವ ಈ ತೊಂದರೆಯ ಬಗ್ಗೆ ಗಮನ ಹರಿಸಿ ಅಗತ್ಯವಾದ ಶೌಚಾಲಯ ಮತ್ತು ಮೂತ್ರಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.