
ಕಲಬುರಗಿ,ಆ.21-ಕಲಬುರಗಿ ಮಹಾನಗರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿದ್ದು, ಇದೇ ರಸ್ತೆಯ ಮೇಲೆ ಓಡಾಡುವ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣಿದ್ದರೂ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಕೇಂದ್ರ ಬಸ್ ನಿಲ್ದಾಣ ರಸ್ತೆ, ಎಂ.ಜಿ.ರೋಡ್, ಕೆಎಂಎಫ್ ಡೈರಿ ರೋಡ್, ಅನ್ನಪೂರ್ಣ ಕ್ರಾಸ್ ರಸ್ತೆ, ಜಗತ್ ರಸ್ತೆ, ಕಿರಾಣಾ ಬಜಾರ್ ರಸ್ತೆಯೂ ಸೇರಿದಂತೆ ಬಹುತೇಕ ಕಡೆ ನಗರದ ಪ್ರಮುಖ ರಸ್ತೆಗಳು ಡಾಂಬರ್ ಕಿತ್ತು ಹೋಗಿ ತಗ್ಗುಗುಂಡಿಗಳು ಬಿದ್ದು ವಾಹನ ಸವಾರರು ಓಡಾಡದಂತಹ ಕೆಟ್ಟ ಸ್ಥಿತಿಗೆ ತಲುಪಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮಗೂ, ಅದಕ್ಕೂ ಯಾವುದೇ ಸಂಬಂಧವೇ ಇಲ್ಲದಂತೆ ಮಗುಮ್ಮಾಗಿ ಕುಳಿತಿದ್ದಾರೆ.
ಇದು ಮಳೆಗಾಲವಾಗಿರುವುದರಿಂದ ರಸ್ತೆಯ ಮಧ್ಯೆದಲ್ಲಿಯೇ ಬಾಯ್ದೆರೆದು ನಿಂತಿರುವ ತಗ್ಗುಗುಂಡಿಗಳಲ್ಲಿ ಮಳೆ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಗೊತ್ತಾಗದೆ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುವ ಘಟನೆಗಳು ನಡೆಯುತ್ತಲಿವೆ. ಆದರೂ ಜಿಲ್ಲೆಯ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಹದಗೆಟ್ಟ ನಗರದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದಕ್ಕೆ ಜನ ಮತ್ತು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
“ನಗರದಲ್ಲಿನ ಪ್ರಮುಖ ರಸ್ತೆಗಳು ಇಷ್ಟೊಂದು ಹಾಳಾಗಿ ಹೋಗಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಜಿಲ್ಲೆಯ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬೇರೆ ನಗರ, ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ ನಗರ ಅಭಿವೃದ್ಧಿ ದೃಷ್ಟಿಯಲ್ಲಿ ಅತ್ಯಂತ ಹಿಂದುಳಿದೆ ಅನಿಸುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ ಇಲ್ಲಿಯೇ ಇದ್ದರೂ, ಜಿಲ್ಲೆಯ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಜಿಲ್ಲೆಯಲ್ಲಿ ಹದಗೆಟ್ಟು ಹೋಗಿರುವ ರಸ್ತೆಗಳ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ?” ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಜನ ಪ್ರತಿನಿಧಿಗಳು, ಜಿಲ್ಲೆಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ನಗರದಲ್ಲಿ ಹದಗೆಟ್ಟು ಹೋಗಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ನಗರದ ನಿವಾಸಿಗಳು ಅನುಭವಿಸುತ್ತಿರುವ ನಿತ್ಯ ಸಂಕಟಕ್ಕೆ ಕೊನೆ ಹಾಡಬೇಕಿದೆ.
ನೆನೆಗುದಿಗೆ ಬಿದ್ದ ರಸ್ತೆ ಅಗಲೀಕರಣ
ನಗರದ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಹರ್ಷ ಗುಪ್ತಾ ಅವರು ಮುನ್ನುಡಿ ಬರೆದಿದ್ದರು. ಆದರೆ ಅವರ ಕೆಲಸಕ್ಕೆ ಅನೇಕ ಅಡ್ಡಿ-ಆತಂಕಗಳು ಎದುರಾಗಿ ಅವರು ಕಲಬುರಗಿ ನಗರದಲ್ಲಿನ ಪ್ರಮುಖ ರಸ್ತೆಗಳ ಅಗಲೀಕರಣ ಕೆಲಸ ಕೈ ಬಿಟ್ಟರು. ಆ ನಂತರ ಬಂದ ಅಧಿಕಾರಿಗಳು ನಗರದ ರಸ್ತೆಗಳ ಅಗಲೀಕರಣಕ್ಕೆ ಮುಂದಾಗಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ರಸ್ತೆ, ಹಳೆ ಮತ್ತು ಹೊಸ ಜೇವರ್ಗಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಅಗಲೀಕರಣವಾದರೆ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಈಗಿರುವ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ. ಈ ಬಗ್ಗೆ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಿ ನಗರದ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಯಾರು ಹೊಣೆ ?
ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲೆ ಹಿಂದುಳಿಯಲು ಯಾರು ಹೊಣೆ ? ಎಂಬ ಪ್ರಶ್ನೆ ಎದುರಾದಾಗಲೆಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾರೆ. ಆದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಗಿ ಪ್ರತಿವರ್ಷ ಮಂಡಳಿಗೆ 5000 ಕೋಟಿ ರೂ. ಅನುದಾನ ಬರುತ್ತಿದ್ದರೂ ನಗರ ಮತ್ತು ಜಿಲ್ಲೆಯ ಅಭಿವೃದ್ಧಿ ಎಲ್ಲಾ ಹಂತಗಳಲ್ಲಿ ಆಗಬೇಕಾದಷ್ಟು ಅಭಿವೃದ್ಧಿ ಏಕೆ ಆಗುತ್ತಿಲ್ಲ ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಮಂಡಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಒಂದಿಷ್ಟಾದರೂ ಹಣ ಮೀಸಲಿಡಲು ಸಾಧ್ಯವಿಲ್ಲವೇ ಈ ಹಣವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿದರೆ ನಗರ ಮತ್ತು ಜಿಲ್ಲೆಯ ಅಭಿವೃದ್ಧಿ ಯಾಗುವುದಿಲ್ಲವೇ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಲಬುರಗಿ ನಗರ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈಗಲಾದರೂ ಮುಂದಾಗಬೇಕಿದೆ.