ಇರಾನ್-ಇಸ್ರೇಲ್ ಕದನ ವಿರಾಮ

ವಾಷಿಂಗ್ಟನ್,ಜೂ.೨೪:ಕಳೆದ ೧೨ ದಿನಗಳಿಂದ ಇರಾನ್-ಇಸ್ರೇಲ್ ನಡುವಣ ನಡೆಯುತ್ತಿದ್ದ ಯುದ್ಧ ಸಂಪೂರ್ಣ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಘೋಷಿಸಿದ್ದಾರೆ.


ಟ್ರಂಪ್ ಕದನವಿರಾಮ ಘೋಷಣೆ ಮಾಡಿದ ನಂತರವೂ ಇರಾನ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿಯ ನಂತರ ಇರಾನ್ ಕದನವಿರಾಮಕ್ಕೆ ಸಹಮತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸುದೀರ್ಘ ೧೨ ದಿನಗಳಿಂದ ನಡೆಯುತ್ತಿದ್ದ ಇರಾನ್-ಇಸ್ರೇಲ್ ನಡುವಣ ಕದನಕ್ಕೆ ತೆರೆ ಬಿದ್ದಿದೆ.


ಕದನವಿರಾಮ ಘೋಷಣೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೆ ಕದನವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.


೨೪ ತಾಸುಗಳ ಹಂತ ಹಂತದ ಕದನವಿರಾಮ ಇಂದು ಪೂರ್ವ ಸಮಯ ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಲಿದೆ ಎಂದು ಟ್ರಂಪ್ ಬರೆದುಕೊಂಡಿರುವ ಅವರು, ಇದು ಯುದ್ಧಕ್ಕೆ ಅಧಿಕೃತ ಅಂತ್ಯವಾಡಲಿದೆ ಎಂದು ಹೇಳಿದ್ದಾರೆ.


ಹೀಗಾಗಿ ಎರಡೂ ದೇಶಗಳ ನಡುವಿನ ೧೨ ದಿನಗಳ ಯುದ್ಧಕ್ಕೆ ತೆರೆ ಬಿದ್ದಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.ಕದನ ವಿರಾಮ ಶಾಂತಿಯುತ ಮತ್ತು ಗೌರವಯುತವಾಗಿರುತ್ತದೆ. ೧೨ ದಿನಗಳ ಯುದ್ಧವನ್ನು ತ್ರಾಣ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಕೊನೆಗೊಳಿಸಿರುವುದಕ್ಕೆ ಇಸ್ರೇಲ್-ಇರಾನ್‌ಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.


ಈ ಯುದ್ಧ ಹಲವು ವರ್ಷಗಳ ಕಾಲ ನಡೆಯಬಹುದಿತ್ತು. ಇದು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡುವ ಹಂತಕ್ಕೂ ತಲುಪಬಹುದಿತ್ತು. ಆದರೆ ಆಗಲಿಲ್ಲ. ಇದು ಎಂದಿಗೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.


ದೇವರು ಇಸ್ರೇಲ್-ಇರಾನ್‌ನ್ನು ಆರ್ಶೀವದಿಸಲಿ. ಮಧ್ಯಪ್ರಾಚ್ಯವನ್ನು ದೇವರು ಆರ್ಶೀವದಿಸಲಿ, ದೇವರು ಸಂಯುಕ್ತ ಸಂಸ್ಥಾನವನ್ನು ಆರ್ಶೀವದಿಸಲಿ ಮತ್ತು ಇಡೀ ಜಗತ್ತನ್ನು ದೇವರು ಆರ್ಶೀವದಿಸಲಿ ಎಂದು ಟ್ರಂಪ್ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ.


ಇಸ್ರೇಲ್-ಇರಾನಿನ ಅಣುಸ್ಥಾವರಗಳನ್ನು ಗುರಿಯಾಗಿರಿಸಿಕೊಂಡು ಭೀಕರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಮುಗಿ ಬಿದ್ದಿತ್ತು. ಹೀಗಾಗಿ ಎರಡೂ ಕಡೆ ಅಪಾರ ಸಾವು-ನೋವು ಸಂಭವಿಸಿತ್ತು.

ಅಚ್ಚರಿ ತಂದ ಟ್ರಂಪ್ ನಿರ್ಧಾರ


ಇಸ್ರೇಲ್-ಇರಾನ್ ನಡುವಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಕದನ ವಿರಾಮ ಘೋಷಣೆ ಮಾಡಿರುವುದಕ್ಕೆ ಉನ್ನತಾಧಿಕಾರಿಗಳಿಗೆ ಅಚ್ಚರಿಗೆ ಕಾರಣವಾಗಿದೆ.


ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕೂಡಲೇ ಟ್ರಂಪ್ ಎರಡೂ ದೇಶಗಳ ನಡುವೆ ಕದನವಿರಾಮ ಘೋಷಿಸಿದರು. ಈ ಕದನವಿರಾಮಕ್ಕೆ ಕತಾರ್ ಮಧ್ಯಸ್ಥಿಕೆ ವಹಿಸಿತ್ತು ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕತಾರ್‌ನ ಅಮೀರ್‌ಶೇಖ್ ತಮೀಮ್, ಬಿಬ್ ಅಹ್ಮದ್ ಅಲ್‌ಥಾನಿ ಅವರು ಕದನವಿರಾಮ ಮಾತುಕತೆಯಲ್ಲಿ ಪ್ರಮುಖಪಾತ್ರ ವಹಿಸಿದ್ದರು.


ಮಾತುಕತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಅಧಿಕಾರ ಇಲ್ಲದ ಕಾರಣ ಹೆಸರನ್ನು ಗೌಪ್ಯವಾಗಿಡಬೇಕು ಎಂಬ ಷರತ್ತಿನೊಂದಿಗೆ ಅಧಿಕಾರಿಗಳು ಈ ಮಾಹಿತಿಯನ್ನು ನ್ಯೂಯಾರ್ಕ್ ಟೈಮ್ಸ್‌ನೊಂದಿಗೆ ಹಂಚಿಕೊಂಡಿದ್ದಾರೆ.


ಟ್ರಂಪ್ ನಿರ್ಧಾರ ಹಿರಿಯ ಅಧಿಕಾರಿಗಳಿಗೂ ಅಚ್ಚರಿಯುಂಟು ಮಾಡಿದೆ. ಕದನವಿರಾಮದ ಬಗ್ಗೆ ಇಸ್ರೇಲ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಘೋಷಣೆ ಮಾಡಿದ ೩ ಗಂಟೆ ನಂತರ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಹೀಗಾಗಿ ಎರಡೂ ರಾಷ್ಟ್ರಗಳು ಕದನವಿರಾಮಕ್ಕೆ ಒಪ್ಪಿಕೊಂಡಿವೆ ಎಂಬ ಪ್ರಶ್ನೆ ಮೂಡಿದೆ.