ಕೆ.ಎಲ್. ರಾಹುಲ್ ೧ ಶತಕ ಹಲವು ದಾಖಲೆಗಳು

ನವದೆಹಲಿ,ಜೂ.೨೪-ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಕೆಎಲ್ ರಾಹುಲ್ ಅದ್ಭುತ ಆಟ ಪ್ರದರ್ಶಿಸಿ ತಮ್ಮ ೯ ನೇ ಟೆಸ್ಟ್ ಶತಕ ಪೂರೈಸಿದ್ದಾರೆ. ಕೆ.ಎಲ್ ರಾಹುಲ್ ಅವರ ಈ ಇನ್ನಿಂಗ್ಸ್ ಟೀಮ್ ಇಂಡಿಯಾದ ಮುನ್ನಡೆಯನ್ನು ೩೦೦ ರನ್‌ಗಳಿಗೂ ಮೀರಿಸಿತ್ತು. ಈ ಶತಕದೊಂದಿಗೆ, ಕೆಎಲ್ ರಾಹುಲ್ ವಿದೇಶಿ ನೆಲದಲ್ಲಿ ಹಲವು ದಾಖಲೆಗಳನ್ನು ದಾಖಲಿಸಿದ್ದಾರೆ.


ಹೆಡಿಂಗ್ಲಿಯಲ್ಲಿ ಬಾರಿಸಿದ ಈ ಶತಕದೊಂದಿಗೆ, ಕೆ.ಎಲ್ ರಾಹುಲ್ ಇಂಗ್ಲೆಂಡ್‌ನಲ್ಲಿ ಮೂರು ಟೆಸ್ಟ್ ಶತಕಗಳನ್ನು ಗಳಿಸಿದ ಮೊದಲ ಏಷ್ಯಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ, ಅವರು ಇಂಗ್ಲೆಂಡ್‌ನಲ್ಲಿ ತಲಾ ಎರಡು ಶತಕಗಳನ್ನು ಗಳಿಸಿರುವ ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ವಿಜಯ್ ಮರ್ಚೆಂಟ್ ಮತ್ತು ತಮೀಮ್ ಇಕ್ಬಾಲ್‌ರಂತಹ ದಂತಕಥೆಗಳನ್ನು ಹಿಂದಿಕ್ಕಿದ್ದಾರೆ.

ಅವರು ಈಗ ಸೇನಾ ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ೯ ಬಾರಿ ೫೦ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ವೀರೇಂದ್ರ ಸೆಹ್ವಾಗ್ ಮತ್ತು ಮುರಳಿ ವಿಜಯ್ ಅವರನ್ನು ಸರಿಗಟ್ಟಿದ್ದಾರೆ. ಸುನಿಲ್ ಗವಾಸ್ಕರ್ (೧೯ ಬಾರಿ) ಮಾತ್ರ ಅವರಿಗಿಂತ ಮುಂದಿದ್ದಾರೆ.

ಹೆಡಿಂಗ್ಲೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ೪೨ ರನ್ ಗಳಿಸುವ ಮೂಲಕ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ೧೦೦೦ ರನ್‌ಗಳ ಗಡಿ ದಾಟಿದರು. ಅವರು ಈ ಸಾಧನೆ ಮಾಡಿದ ೧೭ ನೇ ಭಾರತೀಯ ಆಟಗಾರರಾಗಿದ್ದಾರೆ ಮತ್ತು ಒಂದೇ ತಂಡದ ವಿರುದ್ಧ ೧೦೦೦ ಟೆಸ್ಟ್ ರನ್ ಗಳಿಸಿದ್ದು ಇದೇ ಮೊದಲು.


ಇಂಗ್ಲೆಂಡ್ ವಿರುದ್ಧ ನಾಲ್ಕನೇ ಮತ್ತು ಇಂಗ್ಲೆಂಡ್ ನೆಲದಲ್ಲಿ ಮೂರನೇ ಶತಕ. ಇದು ಅವರನ್ನು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರನ್ನಾಗಿ ಮಾಡಿದೆ.


ನಾಲ್ಕನೇ ದಿನದ ಆಟದ ನಂತರ ಅವರ ಫಾರ್ಮ್ ಬಗ್ಗೆ ಮಾತನಾಡಿದ ರಾಹುಲ್, ಈಗ ಅವರು ಸಂಖ್ಯೆಗಳು ಅಥವಾ ದಾಖಲೆಗಳತ್ತ ಗಮನ ಹರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಈಗ ರನ್ ಗಳಿಸುತ್ತಿದ್ದೇನೆ. ಒಂದು ಕಾಲದಲ್ಲಿ ನಾನು ಆರಂಭ ಪಡೆಯುತ್ತಿದ್ದೆ ಆದರೆ ಅವುಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ, ವಿಶೇಷವಾಗಿ ಟೆಸ್ಟ್‌ಗಳಲ್ಲಿ. ನಾನು ಈಗ ತುಂಬಾ ಶಾಂತವಾಗಿದ್ದೇನೆ ಮತ್ತು ಇನ್ನು ಮುಂದೆ ಸಂಖ್ಯೆಗಳನ್ನು ಬೆನ್ನಟ್ಟುವುದಿಲ್ಲ ಎಂದಿದ್ದಾರೆ.


ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಂತರ, ರಾಹುಲ್ ತಮ್ಮ ನೆಚ್ಚಿನ ಟೆಸ್ಟ್ ಆರಂಭಿಕ ಸ್ಥಾನಕ್ಕೆ ಮರಳಿದ್ದಾರೆ ಮತ್ತು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ನನ್ನ ಸರಾಸರಿಯನ್ನು ನೋಡಿದಾಗ ನನಗೆ ನೋವುಂಟಾಗುತ್ತದೆ, ಆದರೆ ಈ ಹಂತದಲ್ಲಿ ನಾನು ಅಂಕಿಅಂಶಗಳ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ನಾನು ಪ್ರಭಾವ ಬೀರಲು ಬಯಸುತ್ತೇನೆ ಮತ್ತು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಆನಂದಿಸುತ್ತೇನೆ ಮತ್ತು ಅದು ನನಗೆ ತುಂಬಾ ಇಷ್ಟ ಎಂದಿದ್ದಾರೆ .