
ಜೇವರಗಿ,ಮಾ.11: ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿಚಾರ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವ ಮೊದಲೇ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ತಾಲ್ಲೂಕಿನ ಮಾದಿಗ ಸಮಾಜದ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜೇವರ್ಗಿ-ಯಡ್ರಾಮಿ ಘಟಕದ ವತಿಯಿಂದ ತಾಲ್ಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಬೀದರ-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಮೇಲೆ ನೂರಾರು ಜನ ಮಾದಿಗ ಸಮಾಜದ ಬಾಂಧವರು ಜಮಾಯಿಸಿ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಸಂಘಟನೆಯ ಪ್ರಮುಖ ಪರಶುರಾಮ ಮುದಬಾಳ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳು ಹಾಗೂ ರಾಜ್ಯಾದ್ಯಂತ ಖಾಲಿ ಹುದ್ದೆಗಳನ್ನು ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿರುವುದು ಗೊತ್ತಾಗಿದೆ. ಆದರೆ ಸಚಿವ ಸಂಪುಟದ ತೀರ್ಮಾನದಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗುವವರೆಗೆ ಹೊಸ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬಾರದು ಎಂದು 2024ರ ನವೆಂಬರ್ 25ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ. ವಸ್ತುಸ್ಥಿತಿ ಹೀಗಿದ್ದರೂ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು ಮಾದಿಗ ಸಮುದಾಯಕ್ಕೆ ಸರ್ಕಾರ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲರಾಗಿರುವ ಸಚಿವ ಎಚ್.ಸಿ. ಮಹಾದೇವಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.ನಂತರ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ದಿನ್ನಿ, ಚಂದ್ರು ಕೋರೆ, ಭೀಮರಾಯ ಯಡ್ರಾಮಿ, ಸುಭಾಷ ಕಾಂಬಳೆ, ಭಾಗಪ್ಪ ಯಲಗೋಡ, ಗೊಲ್ಲಾಳಪ್ಪ ಬಿಳವಾರ, ಗಂಗಾಧರ ವರ್ಚನಳ್ಳಿ, ವಿಜಯಲಕ್ಷ್ಮಿ ಆಂದೋಲಾ, ಸೈದಪ್ಪ ಇಜೇರಿ, ಶೇಖಪ್ಪ ತಳಗೇರಿ, ಭೀಮರಾಯ ಹಳ್ಳಿ, ಶಿವು ಹಂಗರಗಿ, ಬಸವರಾಜ ಕುಸುಮಾಕರ್, ರಾಹುಲ್ ಕಾಚಾಪೂರ, ಶರಣು ಹರನೂರ, ನಾಗು ಅರಳಗುಂಡಗಿ, ಈರಣ್ಣ ವರವಿ, ಗೊಲ್ಲಾಳಪ್ಪ ಹಂಗರಗಾ, ಪರಶು ಆಲಳಕರ್, ರಾಜು ದೊಡ್ಡಮನಿ, ಹಣಮಂತ ಬಿರಾಳ, ದೇವಿಂದ್ರ ದೊಡ್ಡಮನಿ, ಹುಷೇನಪಟೇಲ ಮಾಲಿಪಟೇಲ ಮುದಬಾಳ ಬಿ, ದೇವಿಂದ್ರ ಬಿಳವಾರ, ಖಾಜಾಪೀರ ಚಿಗರಳ್ಳಿ, ಮಹೇಶ ಬಂಡೆ, ಮುತ್ತಣ್ಣ ಬಿಲ್ಲಾಡ, ಭೀಮರಾಯ ವಾಲಿಕಾರ್. ಮಲ್ಲಣ್ಣ ನರಿಬೋಳ, ಅಯ್ಯಣ್ಣ ಯಾಳವಾರ,ಮಲ್ಲು ಗುಡೂರ, ಸೇರಿದಂತೆ ಅನೇಕರು ಹಾಜರಿದ್ದರು.




























