೪೩ ಲಕ್ಷ ರೈತರಿಗೆ ವಿಮಾ ಪರಿಹಾರ

ಬೆಳಗಾವಿ(ಸುವರ್ಣಸೌಧ), ಡಿ. ೧೦- ರಾಜ್ಯದಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಇತಿಹಾಸದಲ್ಲೇ ನೀಡದಂತಹ ಪರಿಹಾರವನ್ನು ರೈತರಿಗೆ ನೀಡಲಾಗಿದೆ. ಸುಮಾರು ೪೩ ಲಕ್ಷ ರೈತರಿಗೆ ವಿಮಾ ಮೂಲಕ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್ ರವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ೨೮ ಲಕ್ಷ ರೈತರನ್ನು ನೋಂದಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಬೆಳೆ ನಷ್ಟವಾದ ೪೩ ಲಕ್ಷ ರೈತರಿಗೆ ಸುಮಾರು ೫ ಸಾವಿರ ಕೋಟಿಗೂ ಹೆಚ್ಚು ಪರಿಹಾರ ನೀಡಲಾಗಿದೆ. ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಟ್ಟಿರಲಿಲ್ಲ ಎಂದರು.


ಅತಿವೃಷ್ಠಿ ಪರಿಹಾರ ಬೇರೆ, ಬೆಳೆ ಹಾನಿ ಪರಿಹಾರ ಬೇರೆ ಎಂದು ಹೇಳಿದ ಅವರು, ಫಸಲ್ ಭೀಮಾ ಯೋಜನೆಯಡಿ ರೈತರು ವಿಮಾ ಹಣದ ಶೇ. ೨ ರಷ್ಟನ್ನು ಮಾತ್ರ ಕಟ್ಟಬೇಕು. ಉಳಿದ ಶೇ. ೯೮ ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಹೇಳಿದರು.


ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೦೨೨-೨೩ನೇ ಸಾಲಿನಿಂದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನವರೆಗೂ ಒಟ್ಟು ೨೩,೭೮೨ ರೈತರು ೩೧,೩೩೮.೧೩ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದರು.


ಇದುವರೆಗೂ ಈ ಕ್ಷೇತ್ರ ವ್ಯಾಪ್ತಿಯಲ್ಲಿ ೧೩,೭೨೮ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗಿದೆ. ೯೪೫ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು. ವಿಮೆಯಡಿ ರೈತರಿಗೆ ಯಾವುದೇ ಬಾಕಿ ಇಲ್ಲದಂತೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ ಎಂದು ಅವರು ಹೇಳಿದರು.