ಅನುದಾನ ಸದ್ಬಳಕೆಗೆ ಸೂಚನೆ

ಹಾನಗಲ್,ಅ25: ತಾಲೂಕಿಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಅನುದಾನದಡಿ ಮಂಜೂರಿಯಾಗಿರುವ 50 ಕೋಟಿ ರೂ. ಅನುದಾನದ ಪೈಕಿ 7.60 ಕೋಟಿ ರೂ. ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಬಿಡುಗಡೆಗೊಳಿಸಲಾಗಿದ್ದು, ಅನದಾನ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ ಅವರಿಗೆ ಸೂಚಿಸಿದರು.
ಇಲ್ಲಿ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜನರ ಬೇಡಿಕೆ ಇರುವ ಪ್ರದೇಶಗಳಲ್ಲಿ ಅನುದಾನ ದೊರಕಿಸುವಲ್ಲಿ ಕಾಳಜಿ ವಹಿಸಿ. ಅನುಷ್ಠಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ನಿವೇಶನ ರಹಿತರಿಗೆ ನಿವೇಶನ ಹಂಚಲು ಸರ್ಕಾರಿ ಜಾಗ ಗುರುತಿಸಿ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಗಮನ ನೀಡಬೇಕು. ಪ್ರತಿಯೊಂದು ವಾರ್ಡುಗಳಲ್ಲಿ ಸ್ವಚ್ಛತೆ, ಕಸ ಸಂಗ್ರಹಣೆ, ಬೀದಿ ದೀಪಗಳ ನಿರ್ವಹಣೆ ಕುರಿತು ಆಧ್ಯತೆ ನೀಡಿ ಎಂದು ಸೂಚಿಸಿದರು.