
ಕಲಬುರಗಿ : ಮೇ.7:ರವೀಂದ್ರನಾಥ ಟಾಗೋರ್ ಅವರು ಭಾರತೀಯ ಸಾಂಸ್ಕೃತಿಕ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರಗೀತೆ ರಚನೆ ದೇಶಕ್ಕೆ ಪ್ರಥಮ ನೊಬೆಲ್ ದೊರಕಿಸಿಕೊಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಖಾದ್ರಿ ಚೌಕ್ ಸಮೀಪದ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ರವೀಂದ್ರನಾಥ ಠಾಗೋರ್ ರವರ 165ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಟ್ಯಾಗೋರ್ ಬಂಗಾಳಿ ಕವಿ, ಬರಹಗಾರ, ನಾಟಕಕಾರ ಮತ್ತು ಕಲಾವಿದರಾಗಿದ್ದರು. ಅವರು ಭಾರತದ ಅತ್ಯಂತ ಪ್ರಸಿದ್ಧ ಸಾಹಿತಿಗಳಲ್ಲಿ ಒಬ್ಬರು ಮತ್ತು 1913ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದವರು. ತಮ್ಮ ಸಾಹಿತ್ಯ, ಸಂಗೀತ ಮತ್ತು ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು. ಅವರ ಕೃತಿಗಳು ಪ್ರಪಂಚದಾದ್ಯಂತ ಹೆಚ್ಚು ಓದಲ್ಪಡುತ್ತವೆ ಮತ್ತು ಪ್ರೀತಿ, ಶಾಂತಿ, ಮತ್ತು ಮಾನವೀಯತೆಯ ಸಂದೇಶಗಳನ್ನು ಸಾರುತ್ತವೆ ಎಂದರು.
ಟ್ಯಾಗೋರ್ ಅವರ ಪ್ರಮುಖ ಕೃತಿಗಳಲ್ಲಿ “ಗೀತಾಂಜಲಿ”, “ಗೋರಾ”, “ಚೆಹಾರಾ”, “ಕಬೂಲಿವಾಲಾ” ಮತ್ತು “ರಕ್ತಕರವಿ” ಸೇರಿವೆ. ಅವರು ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪಗಳನ್ನು ನೀಡಿದರು ಮತ್ತು ಭಾರತೀಯ ಸಂಸ್ಕೃತಿಯನ್ನು ಪಶ್ಚಿಮಕ್ಕೆ ಪರಿಚಯಿಸಲು ಶ್ರಮಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಅನೇಕ ಕವನಗಳು, ಕಥೆಗಳು, ನಾಟಕಗಳು, ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕೃತಿಗಳು ಭಾವಗೀತಾತ್ಮಕ, ಲಯಬದ್ಧ ಮತ್ತು ಮಾನವೀಯತೆಯ ಬಗ್ಗೆ ಆಶಾವಾದವನ್ನು ಹೊಂದಿವೆ. ಭಾರತದ ರಾಷ್ಟ್ರಗೀತೆ “ಜನ ಗಣ ಮನ” ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆ “ಅಮರ್ ಶೋನಾರ್ ಬಾಂಗ್ಲಾ”ದ ಲೇಖಕರಾಗಿದ್ದಾರೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಲೇಖಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ,ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





















