ಶೀಘ್ರದಲ್ಲೇ ಜಗತ್ತಿನ ೩ನೇ ಆರ್ಥಿಕ ಶಕ್ತಿಯಾಗಿ ಭಾರತ:ಮೋದಿ

ಜಪಾನ್ ಪ್ರವಾಸ

ಟೊಕಿಯೊ,ಆ.೨೯:ಭಾರತ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಹೊಂದಿದ್ದು, ಶೀಘ್ರವೇ ಜಗತ್ತಿನ ೩ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು.


ಎರಡು ದಿನಗಳ ಜಪಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಟೊಕಿಯೊದಲ್ಲಿಂದು ಇಂಡಿಯಾ-ಜಪಾನ್ ಜಂಟಿ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿ ಭಾರತ ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯನ್ನು ಹೊಂದಿದೆ. ತನ್ನ ನೀತಿ-ನಿರೂಪಣೆಯಲ್ಲಿ ಪಾರದರ್ಶಕತೆಯನ್ನು ಹೊಂದಿದೆ. ಪ್ರಸ್ತುತ ವಿಶ್ವದಲ್ಲೇ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ ಮತ್ತು ಅತೀ ಶೀಘ್ರದಲ್ಲೇ ಭಾರತ ವಿಶ್ವದ ೩ನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಅವರು ಹೇಳಿದರು.
ಜಗತ್ತು ಭಾರತವನ್ನು ಮಾತ್ರ ನೋಡುತ್ತಿಲ್ಲ. ಭಾರತವನ್ನು ನಂಬುತ್ತಿದೆ ಎಂದು ಹೇಳಿ ಜಗತ್ತಿನ ದಕ್ಷಿಣ ಭಾಗದಲ್ಲಿ ಜಪಾನಿನ ಹೂಡಿಕೆ ವ್ಯವಹಾರಗಳಿಗೆ ಭಾರತ ಚಿಮ್ಮು ಹಲಿಗೆಯಾಗಲಿದೆ ಎಂದು ಹೇಳಿದರು.


ಉತ್ಪಾದನೆ, ತಂತ್ರಜ್ಞಾನ, ನಾವಿನ್ಯತೆ, ಹಸಿರು ಇಂಧನ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಜಪಾನ್ ಜತೆಗೆ ಪಾಲುದಾರಿಕೆಯನ್ನು ಪ್ರತಿಪಾದಿಸಿ ಜಪಾನ್‌ನ ಶ್ರೇಷ್ಠತೆ ಮತ್ತು ಭಾರತದ ಪರಿಮಾಣಗಳು ಪರಿಪೂರ್ಣ ಪಾಲುದಾರಿಕೆಯನ್ನು ಸೃಷ್ಟಿಸಬಹುದು ಎಂದರು.


ಭಾರತದಲ್ಲಿ ಬಂಡವಾಳ ಬೆಳೆಯುವುದಿಲ್ಲ. ಅದು ಗುಣಿಸುತ್ತದೆ. ಕಳೆದ ೧೧ ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಬೆಳವಣಿಗೆ ಮತ್ತು ಪರಿವರ್ತನೆ ನಿಮಗೆಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.


ಭಾರತವು ಜಾಗತಿಕ ಜಿಡಿಪಿಗೆ ಶೇ. ೧೮ ರಷ್ಟು ಕೊಡುಗೆ ನೀಡುತ್ತಿದೆ. ಭಾರತದ ಮಾರುಕಟ್ಟೆಗಳು ದೊಡ್ಡ ಲಾಭವನ್ನು ಕೊಡುತ್ತಿವೆ. ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆಯ ನಮ್ಮ ವಿಧಾನ ಎಲ್ಲ ಪ್ರಗತಿಗೂ ಚಾಲನೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.


ಸೆಮಿಕಂಡಕ್ಷರ್, ಕ್ವಾಂಟಮ್ ಕಂಪ್ಯೂಟಿಂಗ್, ಬಯೋಟೆಕ್ ಮತ್ತು ಬಾಹ್ಯಾಕಾಶದಲ್ಲಿ ಭಾರತವು ದಿಟ್ಟ ಮತ್ತು ಮಹತ್ವಾಕಾಂಕ್ಷಿಯ ಉಪಕ್ರಮಗಳನ್ನು ತೆಗೆದುಕೊಂಡಿದೆ. ಶುದ್ಧ ಇಂಧನ ಮತ್ತು ಹಸಿರು ಭವಿಷ್ಯದ ಸಹಕಾರಕ್ಕಾಗಿ ಭಾರತ-ಜಪಾನ್ ಜಂಟಿ ಕ್ರೆಡಿಟ್ ಕಾರ್ಯವಿಧಾನದ ಒಪ್ಪಂದಕ್ಕೆ ಸಹಿ ಹಾಕಿವೆ ಎಂದರು.


ಭಾರತವು ಹೊಸ ಮತ್ತು ಸರಳೀಕೃತ ಆದಾಯ ತೆರಿಗೆ ಅನುಸರಣೆಯನ್ನು ಪರಿಚಯಿಸಿದೆ. ನಮ್ಮ ಸುಧಾರಣೆಗಳು ತೆರಿಗೆ ವಿಧಿಸುವಿಕೆಗೆ ಸೀಮಿತವಾಗಿಲ್ಲ. ವ್ಯವಹಾರಗಳನ್ನು ಸುಲಭಗೊಳಿಸುವ ಉಪಕ್ರಮದ ಮೇಲೆ ನಾವು ನಮ್ಮ ಗಮನ ಕೇಂದ್ರೀಕರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.


ಜಪಾನ್-ಭಾರತ ಮೊದಲಿನಿಂದಲೂ ಅತ್ಯುತ್ತಮ ದ್ವಿಪಕ್ಷೀಯ ಭಾಂದವ್ಯವನ್ನು ಹೊಂದಿದೆ. ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಆಶಯವನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.


ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷಿಯನ್ನು ವಿಸ್ತರಿಸಲು ಬಯಸಿದ್ದೇವೆ. ಸೆಮಿಕಂಡಕ್ಟರ್ ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳಲು ನಾವು ಬಯಸುತ್ತೇವೆ ಎಂದು ಮೋದಿ ಹೇಳಿದರು.


ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸಲು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ವಿಶಾಲ ಪ್ರಾದೇಶಿಕ ಮತ್ತು ಜಾಗತಿಕ ಸಹಕಾರದಿಂದಾಗಿ ಅವೇಗವನ್ನು ಹೆಚ್ಚಸಲು ಶ್ರಮಿಸುವುದಾಗಿಯೂ ಅವರು ಹೇಳಿದರು.


ಭಾರತದ ಅಭಿವೃದ್ಧಿಯ ಪಯಣದಲ್ಲಿ ಜಪಾನ್ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದು ಜಪಾನ್‌ನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು, ಮೆಟ್ರೊ ರೈಲಿನ ಉತ್ಪಾದನೆಯಿಂದ ಹಿಡಿದು ಸೆಮಿಕಂಡಕ್ಟರ್, ಸ್ಟಾರ್ಟಪ್‌ಗಳವರೆಗೂ ಜಪಾನಿನ ಹಲವು ಕಂಪನಿಗಳು ಭಾರತದಲ್ಲಿ ೪೦ ಶತಕೋಟಿಗೂ ಹೆಚ್ಚು ಹೂಡಿಕೆ ಮಾಡಿವೆ ಎಂದು ಪ್ರಧಾನಿ ಮೋದಿ ಹೇಳಿದರು.


ಅದ್ಧೂರಿ ಸ್ವಾಗತ


ಜಪಾನ್‌ಗೆ ೭ ವರ್ಷಗಳ ನಂತರ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಗಿದ್ದು, ಭಾರತದ ಜಪಾನ್ ರಾಯಭಾರಿ ಸಿಬಿಜಾರ್ಜ್ ಸೇರಿದಂತೆ ಜಪಾನ್‌ನ ಗಣ್ಯಾತಿಗಣ್ಯರು ಪ್ರಧಾನಿ ಮೋದಿ ಅವರನ್ನು ಟೊಕಿಯೊ ವಿಮಾನನಿಲ್ದಾಣದಲ್ಲಿ ಬರ ಮಾಡಿಕೊಂಡರು. ೭ ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಜಪಾನ್‌ಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದ್ದು, ಅಮೆರಿಕದ ಸುಂಕಾಸ್ತ್ರದ ನಡುವೆಯೇ ಮೋದಿ ಅವರು ಜಪಾನ್‌ನಲ್ಲಿ ಎರಡೂ ರಾಷ್ಟ್ರಗಳ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಜಪಾನ್‌ನ ಪ್ರಧಾನಿ ಶಿಗೇರು ಇಶಿಬಾ ಅವರ ಜತೆ ಚರ್ಚೆ ನಡೆಸಲಿದ್ದು, ಎರಡೂ ದೇಶಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವಕ್ಕೆ ಒಪ್ಪಂದಕ್ಕೂ ಸಹಿ ಹಾಕಲಿವೆ. ಹಾಗೆಯೇ ರಾಜ್ಯದಲ್ಲಿ ಬುಲೆಟ್ ರೈಲುಗಳನ್ನು ತಯಾರಿಸುವ ಪಾಲುದಾರಿಕೆಯನ್ನೂ ಘೋಷಿಸಲಿದೆ.

ನಾಡಿದ್ದು ಚೀನಾ ಭೇಟಿ


ಜಪಾನ್‌ನ ಎರಡು ದಿನಗಳ ಭೇಟಿ ಮುಗಿಸಿದ ನಂತರ ಪ್ರಧಾನಿ ಮೋದಿ ಅವರು, ಆ. ೩೧ ರಂದು ಚೀನಾಗೆ ಭೇಟಿ ನೀಡುವರು. ಆಗಸ್ಟ್ ೩೧ ಮತ್ತು ಸೆಪ್ಟೆಂಬರ್ ೧ ಎರಡೂ ದಿನ ಚೀನಾದಲ್ಲಿರುವ ಪ್ರಧಾನಿ ಮೋದಿ ಅವರು ಚೀನಾದ ಟಿಯಾನ್‌ಜಿಂಗ್‌ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಈ ಶೃಂಗಸಭೆಯಲ್ಲಿ ಹಲವು ರಾಷ್ಟ್ರಗಳ ಮುಖ್ಯಸ್ಥರುಗಳೂ ಸಹ ಭಾಗಿಯಾಗುವರು.