ಭಾರತಕ್ಕೆ 408 ರನ್‌ಗಳ ಹೀನಾಯ ಸೋಲು: ಹರಿಣಗಳ ಕ್ಲೀನ್ ಸ್ವೀಪ್ ಸಾಧನೆ

ಗುವಾಹಟಿ,ನ.೨೬: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿಸ್ತೇಜ ಪ್ರದರ್ಶನ ನೀಡಿದ ಭಾರತ ತಂಡ ದ್ವಿತೀಯ ಟೆಸ್ಟ್ ಕ್ರಿಕಿಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ೪೦೮ ರನ್ ಗಳ ಹೀನಾಯ ಸೋಲು ಕಂಡಿದೆ.


ಇದರೊಂದಿಗೆ ೨೫ ವರ್ಷಗಳ ನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ ವಾಷ್ ಮುಖಭಂಗಕ್ಕೆ ಗುರಿಯಾಗಿದೆ.


ಸರಣಿಯುದ್ದಕ್ಕೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಟೆಸ್ಟ್ ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ೨೦೦೦ನೇ ಇಸವಿಯ ನಂತರ ಇದೇ ಮೊದಲ ಸಲ ಭಾರತದ ನೆಲದಲ್ಲಿ ೨-೦ ಅಂತರದಲ್ಲಿ ಸರಣಿ ಗೆದ್ದಿದೆ. ಈ ಜಯದೊಂದಿಗೆ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲೂ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ.


ಇಲ್ಲಿನ ಬರ್ಸಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ೫೪೯ ರನ್ ಗುರಿ ಬೆನ್ನಟ್ಟಿದ ಭಾರತ, ಕೇವಲ ೧೪೦ ರನ್ ಗಳಿಗೆ ಆಲೌಟಾಯಿತು.
ಪಂದ್ಯದ ಐದನೇ ಹಾಗೂ ಅಂತಿಮ ದಿನವಾದ ಬುಧವಾರ, ೨ ವಿಕೆಟ್ ಗೆ ೨೭ ರನ್ ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆತಿಥೇಯ ರವೀಂದ್ರ ಜಡೇಜಾ (೫೪) ಅವರ ಅರ್ಧ ಶತಕದ ಹೊರತಾಗಿಯೂ ೧೪೦ ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ.


ಸೈಮನ್ ಸ್ಪಿನ್ ಮೋಡಿ: ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಅಸ್ತ್ರಗಳಲ್ಲಿ ಒಬ್ಬರಾದ ಸೈಮೊನ್ ಹಾರ್ಮರ್ ೩೭ ರನ್ ನೀಡಿ ೬ ವಿಕೆಟ್ ಪಡೆಯುವ ಮೂಲಕ ಪ್ರವಾಸಿ ತಂಡದ ಐತಿಹಾಸಿಕ ಗೆಲುವಿಗೆ ನೆರವಾದರು.


ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ:೪೮೯ ಮತ್ತು ೨೬೦ಕ್ಕೆ ೫ ಡಿಕ್ಲೇರ್.
ಭಾರತ: ೨೦೧ ಮತ್ತು ೧೪೦.

ಟೆಸ್ಟ್ ನಲ್ಲಿ ಭಾರತಕ್ಕೆ ಅತಿದೊಡ್ಡ ಸೋಲು
ರನ್ ವಿರುದ್ಧ ಸ್ಥಳ ವರ್ಷ
೪೦೮ ದಕ್ಷಿಣ ಆಫ್ರಿಕಾ ೨೦೨೫
೩೪೨ ಆಸ್ಟ್ರೇಲಿಯಾ ನಾಗ್ಪುರ ೨೦೦೪
೩೪೧ ಪಾಕಿಸ್ತಾನ ಕರಾಚಿ ೨೦೦೬
೩೩೭ ಆಸ್ಟ್ರೇಲಿಯಾ ಮೆಲ್ಬೋರ್ನ್ ೨೦೦೭

೪೦೮, ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಒಲಿದ ೨ನೇ ಅತಿದೊಡ್ಡ ಜಯ. ೨೦೧೮ರಲ್ಲಿ ಆಸ್ಟ್ರೇಲಿಯಾ ವಿರುದ್ಧ ೪೯೨ ರನ್ ಗಳಿಂದ ಗೆದ್ದಿದ್ದು, ದಾಖಲೆಯಾಗಿತ್ತು.

ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ ಕುಸಿತ
ದಕ್ಷಿಣ ಆಫ್ರಿಕಾ ವಿರುದ್ಧ ೦-೨ ಅಂತರದಲ್ಲಿ ಟೆಸ್ಟ್ ಸರಣಿ ಕಳೆದುಕೊಂಡ ಕಾರಣ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲ ಐದನೇ ಸ್ಥಾನಕ್ಕೆ ಜಾರಿದೆ. ಅದರಲ್ಲೂ ಪಾಕಿಸ್ತಾನಕ್ಕಿಂತ ಕೆಳಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಪಾಕಿಸ್ತಾನ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಹೊಂದಿವೆ.