
ಯಾದಗಿರಿ:ಮಾ.9: ಗುರುಮಠಕಲ್ ಕ್ಷೇತ್ರದ ಹತ್ತಿಕುಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಮಹತ್ವದ ಘೋಷಣೆ ಹೊರಬಿದ್ದಿದ್ದು, ಕಾಡಾ ನಾಲಾ ಆಧುನೀಕರಣ ಯೋಜನೆಗೆ ಸುಮಾರು 68 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ಹಲವು ವರ್ಷಗಳಿಂದ ನೀರಾವರಿ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಬಹುಮುಖ್ಯ ಪರಿಹಾರ ದೊರೆಯಲಿದೆ.
ಈ ಯೋಜನೆಯಿಂದ ಹತ್ತಿಕುಣಿ, ಕಟಗಿ ಶಹಾಪುರ, ಹೊನಗೇರಿ, ಯಡ್ಡಳ್ಳಿ, ಬಂದಳ್ಳಿ ಮತ್ತು ದಸರಾಬಾದ್ ಸೇರಿದಂತೆ ಹಲವು ಗ್ರಾಮಗಳ ಸುಮಾರು 5,400 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಕಾಡಾ ನಾಲಾ ಆಧುನೀಕರಣದಿಂದ ನೀರಿನ ಸರಬರಾಜು ಸುಧಾರಣೆಯಾಗುವುದರ ಜೊತೆಗೆ ನೀರಿನ ವ್ಯರ್ಥ ಹರಿವು ಕಡಿಮೆಯಾಗಲಿದೆ.
ಈ ಕುರಿತು ಕನ್ನಡಪರ ಹೋರಾಟಗಾರ ಸಿದ್ದು ನಾಯಕ ಹತ್ತಿಕುಣಿ ಪ್ರತಿಕ್ರಿಯೆ ನೀಡಿದ್ದು, ರೈತರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಈ ಭಾಗದ ಕೃಷಿ ಅಭಿವೃದ್ಧಿಗೆ ಹೊಸ ದಾರಿಗಳು ತೆರೆಯಲಿವೆ ಎಂದು ಹೇಳಿದ್ದಾರೆ.
ಇದಲ್ಲದೆ ರೈತರ ಹಿತದೃಷ್ಟಿಯಿಂದ ಆನೂರು ಕೆ. ಮತ್ತು ಕಂದಳ್ಳಿ ಬ್ರಿಡ್ಜ್-ಕಂ-ಬ್ಯಾರೇಜ್‍ಗಳಿಗೆ ಹೈಡ್ರಾಲಿಕ್ ಗೇಟ್ ಅಳವಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಈ ಯೋಜನೆ ಜಾರಿಯಾದರೆ ನೀರಿನ ಸಂಗ್ರಹ ಸಾಮಥ್ರ್ಯ ಹೆಚ್ಚಾಗಿ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ.
ಕೃಷಿ ಆಧಾರಿತ ಪ್ರದೇಶವಾಗಿರುವ ಗುರುಮಠಕಲ್ ಕ್ಷೇತ್ರದಲ್ಲಿ ಇಂತಹ ನೀರಾವರಿ ಯೋಜನೆಗಳು ಜಾರಿಯಾಗುವುದರಿಂದ ಗ್ರಾಮೀಣ ಆರ್ಥಿಕತೆಗೆ ಬಲ ಸಿಗಲಿದ್ದು, ರೈತರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ಸ್ಥಳೀಯರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.






















