
ಬೀದರ್: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿ ವತಿಯಿಂದ ಉತ್ತರಪ್ರದೇಶದ ಕಾಶಿಯಲ್ಲಿ ಮಾ. ೨೩ ರಂದು ಹಮ್ಮಿಕೊಳ್ಳಲಾದ ಅಮರ ಬಲಿದಾನ ದಿನಾಚರಣೆಯ ಭಿತ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಗರದಲ್ಲಿ ಶನಿವಾರ ಬಿಡುಗಡೆ ಮಾಡಿದರು.
ಹುತಾತ್ಮರ ಸ್ಮರಣೆಗೆ ಸಮಿತಿಯಿಂದ ಅಮರ ಬಲಿದಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ದೇಶಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸಿ, ಗೌರವಿಸಲು ಸಮಿತಿಯಿಂದ ಪ್ರತಿ ವರ್ಷ ಅಮರ ಬಲಿದಾನ ದಿನ ಆಚರಿಸುತ್ತಾ ಬರಲಾಗಿದೆ. ಹಿಂದೆ ಬೆಂಗಳೂರು, ನಾಂದೇಡ್, ಪಂಜಾಬ್, ನವದೆಹಲಿ, ರಾಮೇಶ್ವರಂನಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಈ ಬಾರಿ ಕಾಶಿಯ ಚೌಕಾಘಾಟ್‌ನ ಅಲಾಮ್ ರಸ್ತೆಯಲ್ಲಿನ ಪದ್ಮವಿಭೂಷಣ ಗಿರಿಜಾದೇವಿ ಸಾಂಸ್ಕೃತಿಕ ಸಂಕೊಲ ಮಕಬೋಲದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದರು.
೧೯ ರಂದು ಬೆಳಿಗ್ಗೆ ೧೦ಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜೈ ಭಾರತ ಮಾತಾ ಮಂದಿರದಿAದ ದೇಶ ಭಕ್ತರು ಕಾರ್ಯಕ್ರಮ ನಿಮಿತ್ತ ಕಾಶಿವರೆಗೆ ವಾಹನಗಳ ಮಹಾ ರ್ಯಾಲಿ ನಡೆಸಲಿದ್ದಾರೆ ಎಂದು ಹೇಳಿದರು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದ ರ್ಯಾಲಿಯು ಕಲಬುರಗಿ, ಹುಮನಾಬಾದ್, ಬೀದರ್, ಉದಗಿರ, ಜಾಮ್ ಝಲಕೋಟ್, ನಾಂದೇಡ್, ಗದ್ದಗಾಂವ್, ನಾಗಪುರ, ಜಬಲಪುರ, ರೇವಾ, ಮಿರ್ಚಾಪುರ ಮೂಲಕ ಹಾಯ್ದು ಕಾಶಿಗೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಒಟ್ಟು ೩೦೦ ಕಾರುಗಳು ಪಾಲ್ಗೊಳ್ಳಲಿವೆ. ರ್ಯಾಲಿ ಮಾರ್ಗದಲ್ಲಿ ದೇಶ ಭಕ್ತಿ ಗೀತೆಗಳು ಮೊಳಗಲಿವೆ. ಭಕ್ತರಿಗೆ ಪ್ರಸಾದ, ವಸತಿ ಇತ್ಯಾದಿಗಳ ವ್ಯವಸ್ಥೆ ಇರಲಿದೆ. ಕಾಶಿಯ ಕಾರ್ಯಕ್ರಮದಲ್ಲಿ ಅಪಾರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಶರಣು ಮೋದಿ, ಶಿವಕುಮಾರ ಮದನೂರ, ಮಾಣಿಕ ಮೇತ್ರೆ, ಸಂದೇಶ್ ಪಾಟೀಲ, ರಾಜಕುಮಾರ, ಅನಿಲಕುಮಾರ, ನಿತೀಶ್ ಪಾಟೀಲ, ಪ್ರವಣ್ ಶಿವಪೂಜೆ, ಕೃಷ್ಣ, ಬಲಬೀರ್ ಪಾಟೀಲ, ಓಂಕಾರ, ಬಸವ ಸ್ವಾಮಿ, ಪ್ರಶಾಂತ ಹಂಗರಗೆ, ಕಿರಣ ಹಲಬರ್ಗೆ ಮತ್ತಿತರರು ಇದ್ದರು.


























