Home ಮುಖಪುಟ ಸುದ್ದಿ ಶಾಲಾ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆ ಸಹಿಸಲ್ಲ

ಶಾಲಾ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆ ಸಹಿಸಲ್ಲ

ಬೆಂಗಳೂರು,ಮಾ.೨೫-ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಸಹಿಸುವುದಿಲ್ಲ, ಕಟ್ಟುನಿಟ್ಟಾಗಿ ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೇಲ್ಮನೆಯಲ್ಲಿ
ತಿಳಿಸಿದರು.


ಮೇಲ್ಮನೆಯಲ್ಲಿ ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ – ಸಕ್ರಮಾತಿ) ವಿಧೇಯಕ -೨೦೨೬ ವಿಧೇಯಕದ ಮೇಲೆ ನಡೆದ ಚರ್ಚೆಯ ವೇಳೆ ಮೇಲ್ಮನೆ ಬಿಜೆಪಿ ಸದಸ್ಯ ಪಿ.ಎಚ್. ಪೂಜಾರ ಅವರು, ನಮ್ಮ ಕುಟುಂಬ ದಾನವಾಗಿ ನೀಡಿದ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ, ಅಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ದೂರಿದರು.


ಇದಕ್ಕೆ ಉತ್ತರಿಸುವ ವೇಳೆ ಸಚಿವ ಮಧು ಬಂಗಾರಪ್ಪ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಗಳು ನಡೆದರೆ ಇಲಾಖೆ ಸಹಿಸುವ ಪ್ರಶ್ನೆಯೇ ಇಲ್ಲ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


ಕಂದಾಯ ಇಲಾಖೆಯ ನಂತರ ಶಿಕ್ಷಣ ಇಲಾಖೆಯಲ್ಲಿಯೇ ಅತೀ ಹೆಚ್ಚು ಜಮೀನು ಹೊಂದಿದ್ದು, ಎಲ್ಲ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಸ್ವತ್ತುಗಳ ನಿಖರ ಹಾಗು ಭೂ ದಾಖಲೆಗಳ ನಿರ್ವಹಣೆ, ಒತ್ತುವರಿ ತೆರವು ಮೊದಲಾದ ಕಾರ್ಯನಿರ್ವಹಣೆಗೆ ನುರಿತ ಕಾನೂನಾತ್ಮಕ ತಂಡ ಸಹ ರಚನೆಗೆ ಈ ನೂತನ ತಿದ್ದುಪಡಿಯಲ್ಲಿ ಅವಕಾಶವಿದೆ ಎಂದರು.


ಯಾವುದೋ ಕಾಲಘಟ್ಟದಲ್ಲಿ ವಕ್ಫ್ಗೂ ಸಹ ಶಾಲಾ ಜಮೀನುಗಳು ಹೋಗಿರಬಹುದು, ಈ ನಿಟ್ಟಿನಲ್ಲಿ ವಕ್ಫ್ ಮಂಡಳಿ ಹಾಗೂ ಇಲಾಖಾ ಸಚಿವರಿಗೂ ಸಹ ಈ ವಿಷಯವಾಗಿ ಚರ್ಚೆ ನಡೆಸಲಾಗುವುದು ಎಂಬ ವಿಷಯವನ್ನು ಸಹ ಪ್ರಕಟಿಸಿದರು.


ದಾನ ನೀಡಿದ ಕುಟುಂಬ ಸದಸ್ಯರನ್ನು ಆಯಾ ಶಾಲೆಯ ಎಸ್‌ಡಿಎಂಸಿ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡಿ ಎಂಬ ಸದಸ್ಯ ಹಣಮಂತ ನಿರಾಣಿ ಸಲಹೆ ಸೇರಿದಂತೆ ಅನೇಕ ಸಲಹೆಗಳನ್ನು ಪರಿಗಣಸಿ ನಿಯಮಾವಳಿ ರೂಪಿಸುವ ಸಂದರ್ಭದಲ್ಲಿ ಅಂತಿಮಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಸುದೀರ್ಘ ಚರ್ಚೆಯ ನಂತರ ಮೇಲ್ಮನೆಯಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ದೊರಕಿತು.