Home ಜಿಲ್ಲೆ ಚಿಕ್ಕ ಪಡಸಲಗಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ

ಚಿಕ್ಕ ಪಡಸಲಗಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ

ಸಂಜೆ ವಾಣಿ ವಾರ್ತೆ,
ಜಮಖಂಡಿ: ಏ.೯: ತಾಲೂಕಿನ ಚಿಕ್ಕ ಪಡಸಲಗಿ ಗ್ರಾಮದಲ್ಲಿ ಕೃಷ್ಣಾ ನದಿಯಿಂದ ಅಕ್ರಮವಾಗಿ ಮಣ್ಣು ತೆಗೆದು ಇಟ್ಟಿಗೆ ಭಟ್ಟಿಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬAಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ಪ್ರಮುಖರಾದ ಶಿವಾನಂದ್ ಲಕ್ಷ್ಮಣ್ ಬೋದ್ಲಿ ಹಾಗೂ ಕಿರಣ ಮನೋಹರ ಗುಗ್ಗರಿ ಸೇರಿದಂತೆ ಗ್ರಾಮಸ್ಥರು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮತ್ತು ತಹಶೀಲ್ದಾರ ಅನೀಲ ಬಡಗೇರ ಅವರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ್ ಲಕ್ಷ್ಮಣ್ ಬೋದ್ಲಿ ಅವರು, ಚಿಕ್ಕ ಪಡಸಲಗಿ ಗ್ರಾಮದ ಬಿಜಾಪುರ ಮುಖ್ಯ ರಸ್ತೆಯ ಎಡ ಹಾಗೂ ಬಲಭಾಗಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದ್ದು, ಅದನ್ನು ಇಟ್ಟಿಗೆ ಭಟ್ಟಿಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಭಟ್ಟಿಗಳಲ್ಲಿ ಬಳಸುವ ಹೂದಿ ಹಾಗೂ ಕಲ್ಲಿದ್ದಲಿನ ಹೊಗೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಇದೇ ವಿಷಯವಾಗಿ ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ ಕಚೇರಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಭಟ್ಟಿಗಳ ಮಾಲೀಕರನ್ನು ಪ್ರಶ್ನಿಸಿದಾಗ ಅವರು ಅಧಿಕಾರಿಗಳಿಗೆ ಹಣ ನೀಡುತ್ತಿರುವುದಾಗಿ ಹೇಳಿ ನಿರ್ಲಕ್ಷ್ಯ ಧೋರಣೆ ತೋರಿರುವುದಾಗಿ ಆರೋಪಿಸಿದರು.
ಇನ್ನೊಬ್ಬ ಗ್ರಾಮಸ್ಥ ಕಿರಣ ಮನೋಹರ ಗುಗ್ಗರಿ ಮಾತನಾಡಿ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದನ್ನು ಬಳಸಿಕೊಂಡು ಅಕ್ರಮವಾಗಿ ಮಣ್ಣು ಸಾಗಣೆ ನಡೆಯುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗದಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ಅಕ್ರಮ ಮಣ್ಣು ಗಣಿಗಾರಿಕೆಯನ್ನು ನಿಲ್ಲಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಶಿವಾನಂದ ಎನಗಾಯಿ, ಮುತಾಲಿಕ ಬೋದ್ಲಿ, ಮುತ್ತಪ್ಪ ಮರನೂರ, ಮಹಾದೇವ ಗುಗ್ಗರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.