
ಬೆಂಗಳೂರು,ಸೆ.೧೩:ರಾಜ್ಯದಲ್ಲಿ ನಡೆದಿರುವ ಗಣಿ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ (ಎನ್‌ಐಟಿ) ರಚಿಸುವಂತೆ ಕಾಂಗ್ರೆಸ್‌ನ ಹಿರಿಯ ನಾಯಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ೧ ಲಕ್ಷ ಕೋಟಿ ರೂ. ಮೊತ್ತದ ಗಣಿ ಹಗರಣ ನಡೆದಿದೆ. ಈ ಹಗರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಕಾಂಗ್ರೆಸ್‌ನ ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರುಗಳು ಆಗ್ರಹಿಸಿದ್ದಾರೆ.
ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ರಾಣಿ ಸತೀಶ್, ಬಿ.ಎಲ್ ಶಂಕರ್,ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ, ಬಿ.ಎಲ್ ಚಂದ್ರಪ್ಪ, ಡಾ.ಎಲ್. ಹನುಮಂತಯ್ಯ, ವಿನಯ್‌ಕುಮಾರ್ ಸೊರಕೆ, ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಕೊಂಡಜ್ಜಿ ಮೋಹನ್, ಪಿ.ಆರ್ ರಮೇಶ್, ಪ್ರಕಾಶ್ ರಾಥೋಡ್, ಆಗಾ ಸುಲ್ತಾನ್, ವಿ.ಆರ್ ಸುದರ್ಶನ್ ಸೇರಿದಂತೆ ೨೦ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರುಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ಈ ಪತ್ರದ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾನೂನು ಸಚಿವ ಎಚ್.ಕೆ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಇವರುಗಳಿಗೂ ಕಳುಹಿಸಿ ಗಣಿ ಅಕ್ರಮದ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿ ಎಂದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಮತ್ತು ಇನ್ನಿತರ ಭಾಗಗಳಲ್ಲಿ ಗಣಿ ಮಾಲೀಕರು ೨ ಸಾವಿರ ಇಸವಿಯಿಂದ ಅಕ್ರಮವಾಗಿ ಗಣಿ ಲೂಟಿ ಮಾಡುತ್ತಿದ್ದರೂ ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷದ ನಾಯಕತ್ವವು ವಿಧಾನ ಪರಿಷತ್‌ನಲ್ಲಿ ಹೋರಾಟ ಮಾಡಿ ಹಗರಣವನ್ನು ನ್ಯಾಯಮೂರ್ತಿ ಯು.ಎಲ್ ಭಟ್ ಆಯೋಗಕ್ಕೆ ತನಿಖೆ ಮಾಡಲು ಒಪ್ಪಿಸಿತ್ತು.
ನ್ಯಾಯಮೂರ್ತಿ ಭಟ್ ಅವರ ಆಯೋಗವು ಇದು ಅಂತರ್ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಹಗರಣವಾಗಿರುವುದರಿಂದ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿತ್ತು. ಆದರೆ, ಅಂದಿನ ಸರ್ಕಾರ ಒಪ್ಪಿರಲಿಲ್ಲ. ಇದರ ವಿರುದ್ಧ ಪರಿಷತ್‌ನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಿದ್ದರಿಂದ ಅಂದಿನ ಸರ್ಕಾರ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಇದರ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಬಸವರಾಜರಾಯರೆಡ್ಡಿ, ಅಮರೇಗೌಡ ಬಯ್ಯಾಪುರ, ವಿ. ಮುನಿಯಪ್ಪ, ಕೆ. ಶಿವಮೂರ್ತಿ ನಾಯಕ್ ಅವರನ್ನೊಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಅಕ್ರಮ ಗಣಿಗಾರಿಕೆಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ೨೦೦೮ರ ನ. ೧೬ ರಂದು ವರದಿ ನೀಡಿ ಹತ್ತಾರು ಸಾವಿರ ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಕೆಲವರು ಲೂಟಿ ಮಾಡಿ, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ. ಹಾಗಾಗಿ, ಅಕ್ರಮ ಗಣಿಗಾರಿಕೆಯ ವಿಷಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಇದಾದ ನಂತರ ಅನೇಕ ಬೆಳವಣಿಗೆಗಳು ನಡೆದಿವೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಚ್.ಕೆ ಪಾಟೀಲ್ ನೇತೃತ್ವದ ಉಪಸಮಿತಿ ನೀಡಿರುವ ವರದಿ ಆಧಾರದ ಮೇಲೆ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು. ಲೂಟಿಕೋರರ ವಿರುದ್ಧ ಕ್ರಮ ಆಗಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.