Home ಮುಖಪುಟ ಸುದ್ದಿ ರಾಹುಕಾಲದಲ್ಲಿ ಬಜೆಟ್ ಮಂಡಿಸಿದ್ದೇನೆ: ಸಿಎಂ

ರಾಹುಕಾಲದಲ್ಲಿ ಬಜೆಟ್ ಮಂಡಿಸಿದ್ದೇನೆ: ಸಿಎಂ

ಬೆಂಗಳೂರು, ಮಾ. ೨೫- ನಾನು ರಾಹುಕಾಲ, ಗುಳಿಕಾಲ ಇವನ್ನೆಲ್ಲಾ ನಂಬಲ್ಲ. ಹಿಂದೆಯೆಲ್ಲಾ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ಕರ್ಮ ಸಿದ್ಧಾಂತದ ಬಗ್ಗೆ ಪ್ರಸ್ತಾಪಿಸಿ, ಇದು ನನ್ನ ಹಣೆಬರಹ, ಪೂರ್ವಜನ್ಮದ ಕರ್ಮ ಎಂದೆಲ್ಲಾ ಮಾತನಾಡುತ್ತಾರೆ.

ಇದರಲ್ಲಿ ನನಗೆ ನಂಬಿಕೆ ಇಲ್ಲ. ಕರ್ಮ ಸಿದ್ಧಾಂತವನ್ನು ನಾನು ನಂಬಲ್ಲ. ಬಸವಣ್ಣನವರು ೮೦೦ ವರ್ಷಗಳ ಹಿಂದೆಯೇ ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು ಎಂದು ಹೇಳಿದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಹಾಗಾದರೆ ಬಜೆಟ್‌ನ್ನು ರಾಹುಕಾಲ ಆರಂಭವಾಗುವ ೧೫ ನಿಮಿಷಗಳ ಮೊದಲು ಮಂಡಿಸಿದ್ದೇಕೆ, ನೀವು ಹೇಳುವುದೊಂದು, ಮಾಡುವುದು ಇನ್ನೊಂದು ಎಂದು ಕುಟುಕಿದ್ದರು.


ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ರಾಹುಕಾಲ, ಯಮಗಂಡ ಕಾಲ, ಗುಳಿಕಕಾಲ ಇವನ್ನೆಲ್ಲಾ ನಂಬಲ್ಲ. ಸೂರ್ಯಗ್ರಹಣ, ಯುಗಾದಿ, ಶಿವರಾತ್ರಿ ದಿನವೂ ನಾನು ಮಾಂಸ ತಿನ್ನುತ್ತೇನೆ. ನೀವು ಯಾರಾದರೂ ಆ ರೀತಿ ಮಾಡಿದ್ದೀರಾ, ನನಗೆ ಎಲ್ಲಾ ದಿನವೂ ಒಂದೇ. ನಿಮ್ಮ ನಂಬಿಕೆ ನಿಮ್ಮದು, ನನ್ನ ನಂಬಿಕೆ ನನ್ನದು ಎಂದರು.


ನಾನು ದೇವರನ್ನು ನಂಬುತ್ತೇನೆ. ದೇವರಿದ್ದಾನೆ. ದೇವರಿಲ್ಲದೆ ಜಗತ್ತು ನಡೆಯಲು ಸಾಧ್ಯವಿಲ್ಲ. ಆದರೆ ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಂಬುದನ್ನು ನಾನು ನಂಬಲ್ಲ. ದೇವರು ಎಲ್ಲಾ ಕಡೆಯೂ ಇದ್ದಾನೆ. ಅದಕ್ಕಾಗಿಯೇ ಬಸವಣ್ಣನವರು ನಾನು ಬಡವನಯ್ಯ, ಎನ್ನ ಕಾಲೇ ಕಂಭ, ನನ್ನ ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದು ಹೇಳಿದ್ದರು. ಅದನ್ನು ನಾನು ಒಪ್ಪುತ್ತೇನೆ ಎಂದರು.


ವಿದ್ಯೆಯಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಇರಬೇಕು. ಇಲ್ಲದಿದ್ದರೆ ಮೂಢನಂಬಿಕೆಗಳಿಗೆ ಒಳಗಾಗುತ್ತೇವೆ. ನಾನು ಹಿಂದೆ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ತಂದಿದ್ದೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.