
ವಾಷಿಂಗ್ಟನ್,ಫೆ.೨೦-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ್ಗೆ ತಮ್ಮ ವಿಚಿತ್ರ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟ್ರಂಪ್ ಯಾವ ವೇದಿಕೆಯಲ್ಲಿ ಏನು ಹೇಳುತ್ತಾರೆ, ಅವರ ಮಾತುಗಳು ಎಷ್ಟು ಗಂಭೀರವಾಗಿರುತ್ತವೆ ಅಥವಾ ಹಗುರವಾಗಿರುತ್ತವೆ ಎಂಬುದನ್ನು ಮೊದಲೇ ಊಹಿಸುವುದು ಅಸಾಧ್ಯ. ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಹೇಳಿಕೊಳ್ಳುವ ರಾಷ್ಟ್ರದ ಅಧ್ಯಕ್ಷರು, ಜಾಗತಿಕ ಶಾಂತಿಗಾಗಿ ಒಂದು ಸಂಘಟನೆಯನ್ನು ಸ್ಥಾಪಿಸಿದಾಗ, ತನ್ನ ಮೊದಲ ಸಭೆಯಲ್ಲಿ ವೇದಿಕೆಯಿಂದ ಯುವ ಮತ್ತು ಸುಂದರ ಪುರುಷರಿಗಿಂತ ಮಹಿಳೆಯರನ್ನು ಇಷ್ಟಪಡುತ್ತೇನೆ ಎಂದು ಘೋಷಿಸುತ್ತಾರೆಂದು ಯಾರಾದರೂ ಊಹಿಸಲು ಸಾಧ್ಯವೇ? ಟ್ರಂಪ್ ಅದನ್ನೇ ಮಾಡಿದ್ದಾರೆ. ಗಾಜಾ ಪುನರ್ನಿರ್ಮಾಣಕ್ಕಾಗಿ ರಚಿಸಲಾದ ಶಾಂತಿ ಮಂಡಳಿಯ ಸಭೆಯಲ್ಲಿ ಟ್ರಂಪ್ ನೀಡಿದ ಹೇಳಿಕೆಯು ಸುದ್ಧಿಯಾಗುತ್ತಿದೆ.
ಗುರುವಾರ ನಡೆದ ಗಾಜಾದ ಭವಿಷ್ಯದ ಮೇಲೆ ಕೇಂದ್ರೀಕರಿಸಬೇಕಿದ್ದ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ವಿಲಕ್ಷಣ ಹೇಳಿಕೆಗಳೊಂದಿಗೆ ಗಂಭೀರ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಪರಾಗ್ವೆಯ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರನ್ನು ಸ್ವಾಗತಿಸಿದ ಟ್ರಂಪ್, “ಯುವ ಮತ್ತು ಸುಂದರವಾಗಿರುವುದು ಒಳ್ಳೆಯದು. ನಾವು ನಿಮ್ಮನ್ನು ಇಷ್ಟಪಡಬೇಕು ಎಂದು ಅರ್ಥವಲ್ಲ. ನನಗೆ ಯುವ, ಸುಂದರ ಪುರುಷರನ್ನು ಇಷ್ಟವಿಲ್ಲ.
ನನಗೆ ಮಹಿಳೆಯರನ್ನು ಕಂಡರೆ ತುಂಬಾ ಇಷ್ಟ. ನನಗೆ ಪುರುಷರಲ್ಲಿ ಆಸಕ್ತಿ ಇಲ್ಲ” ಎಂದು ಹೇಳಿದ್ದಾರೆ. ಟ್ರಂಪ್ ಅವರ ಹೇಳಿಕೆ ಎಲ್ಲರಲ್ಲೂ ನಗು ತರಿಸಿದೆ.
೪೭ ವರ್ಷದ ಪೇನಾ, ಪರಾಗ್ವೆಯ ಪ್ರಜಾಪ್ರಭುತ್ವ ಯುಗದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ವೃತ್ತಿಯಲ್ಲಿ ಅರ್ಥಶಾಸ್ತ್ರಜ್ಞರಾಗಿರುವ ಅವರು ಈ ಹಿಂದೆ ದೇಶದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೊಲೊರಾಡೋ ಪಕ್ಷದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನವನ್ನು ಗೆದ್ದ ನಂತರ ಅವರು ಆಗಸ್ಟ್ ೨೦೨೩ ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಚಿಸಿದ ಹೊಸ ಸಂಘಟನೆಯಾದ ಬೋರ್ಡ್ ಆಫ್ ಪೀಸ್ ಫೆಬ್ರವರಿ ೧೯ ರಂದು ವಾಷಿಂಗ್ಟನ್‌ನಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿದೆ. ಇಲ್ಲಿ, ಟ್ರಂಪ್ ವಿಶ್ವಸಂಸ್ಥೆ, ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಯುವ, ಸುಂದರ ಪುರುಷರು ಸೇರಿದಂತೆ ವಿವಿಧ ವಿಷಯಗಳ ಕುರಿತು ದೀರ್ಘ ಭಾಷಣ ಮಾಡಿದ್ದಾರೆ.




























