ಕದ್ದು ಮುಚ್ಚಿ ಮಾತಾಡಿಲ್ಲ: ಡಿಕೆಶಿ

ಬೆಂಗಳೂರು, ಫೆ. ೧೦- ಅಧಿಕಾರ ಹಂಚಿಕೆಯ ವಿಚಾರದಲ್ಲಿ ನನಗೆ ಯಾವುದೇ ಗೊಂದಲ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಸಿದ್ದರಾಮಯ್ಯ ಏನು ಮಾತನಾಡಿಕೊಂಡಿದ್ದೇವೆ ಎಂಬುದು ನಮಗೆ ಗೊತ್ತು. ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ. ವರಿಷ್ಠರ ಸಮ್ಮುಖದಲ್ಲೇ ಮಾತನಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಏನು ಮಾತನಾಡಿಕೊಂಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಲ್ಲ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಯಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡುತ್ತೇನೆ ಎಂದರು.


ಅಧಿಕಾರ ಹಂಚಿಕೆಯ ವಿಚಾರದಲ್ಲಿ ಗೊಂದಲ ಏನೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನನಗಂತೂ ಇಲ್ಲ. ಬೇರೆಯವರು ಟೆನ್ಷನ್ ತೆಗೆದುಕೊಳ್ಳುವುದಾಗಲೀ, ಹೇಳಿಕೆ ನೀಡುವುದರಿಂದಾಗಲೀ ಏನೂ ಪ್ರಯೋಜನ ಇಲ್ಲ. ನನ್ನ ಪರ-ವಿರುದ್ಧ ಹೇಳಿಕೆ ಕೊಡಬಹುದು ಅಷ್ಟೇ ಎಂದರು.


ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವರು, ಶಾಸಕರು ಯಾರೇ ಹೇಳಿಕೆ ನೀಡಿದರೂ ಅದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ. ಎಲ್ಲ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಹೇಳಿದ್ದಾರೆ. ಅದನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದರು.
ಇಂದು ದೆಹಲಿಗೆ ತೆರಳುತ್ತಿದ್ದೇನೆ. ಸಂಜೆ ಚುನಾವಣೆಗೆ ಸಂಬಂಧಿಸಿದಂತೆ ಎಐಸಿಸಿ ನಾಯಕರ ಜತೆ ಸಭೆ ಇದೆ. ದೆಹಲಿಗೆ ಹೋದ ಮೇಲೆ ಎಲ್ಲ ನಾಯಕರನ್ನು ಭೇಟಿ ಮಾಡೇ ಮಾಡುತ್ತೇನೆ. ಯಾರ್ಯಾರು ಸಿಕ್ಕುತ್ತಾರೆ ಎಲ್ಲರನ್ನು ಭೇಟಿ ಮಾಡುತ್ತೇನೆ ಎಂದರು.


ನಿಮಗೆ ಇಂದು ಶುಭ ದಿನವಾಗಲಿದೆಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ, ನಿತ್ಯವೂ ನನಗೆ ಒಳ್ಳೆಯ ದಿನವೇ. ಪ್ರತಿ ದಿನವೂ ಸಂತೋಷದ ದಿನವೇ, ಪ್ರತಿ ದಿನವೂ ಕಷ್ಟದ ದಿನವೆ. ಟೀಕೆಗಳು ಬರುತ್ತಲೆ ಇರುತ್ತವೆ. ಟೀಕೆಗಳನ್ನು ಎದುರಿಸಬೇಕು ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಲೇಬೇಕು ಎಂದರು.


ನಾಯಕತ್ವ ವಿಚಾರದ ಬಗ್ಗೆ ನಾವು ಮಾತನಾಡಿದರೆ ನೋಟಿಸ್ ಕೊಟ್ಟಿದ್ದಾರೆ. ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡಿಲ್ಲ. ನಮಗೆ ನೋಟಿಸ್ ಕೊಟ್ಟಂತೆ ಎಲ್ಲರಿಗೂ ನೋಟಿಸ್ ಕೊಡಬೇಕು ಎಂದು ರಾಮನಗರ ಕೈ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಹೈಕಮಾಂಡ್‌ನ ಕೇಳೋಣ ಎಂದಷ್ಟೇ ಹೇಳಿ, ದೆಹಲಿ ಭೇಟಿ ಗುಟ್ಟಿನ ಬಗ್ಗೆ ಮತ್ತೆ ಮತ್ತೆ ಕೇಳಲಾದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್, ಹೆಚ್ಚಿನ ಪ್ರತಿಕ್ರಿಯೆ ನೀಡದೆ ತೆರಳಿದರು.


ದೆಹಲಿ ಭೇಟಿ ಕುತೂಹಲ


ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಸಿದ್ಧತಾ ಸಭೆಗಳನ್ನು ನಡೆಸಿರುವಾಗಲೇ ಬಜೆಟ್ ಸಭೆಗಳನ್ನು ಬಿಟ್ಟು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.


ದೆಹಲಿಗೆ ತೆರಳುತ್ತಿರುವ ಬಗ್ಗೆ ನಿನ್ನೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೆಹಲಿಗೆ ಭೇಟಿ ನೀಡುವುದ ರಾಜಕಾರಣಕ್ಕೆ. ನಮ್ಮ ನಾಯಕರನ್ನು ಭೇಟಿಯಾಗುವುದು ಕರ್ತವ್ಯ. ಈ ಭೇಟಿ ವೇಳೆ ನಮ್ಮ ಕಷ್ಟ, ಧುಃಖ ದುಮ್ಮಾನ, ಬಯಕೆ ಎಲ್ಲವನ್ನೂ ಅವರಿಗೆ ಹೇಳಿಕೊಳ್ಳುತ್ತೇನೆ ಎಂದರು
ದೆಹಲಿಗೆ ನನ್ನನ್ನು ದೊಡ್ಡ ನಾಯಕರು ಆಹ್ವಾನಿಸಿದ್ದಾರೆ. ಅವರನ್ನು ಭೇಟಿ ಮಾಡುತ್ತೇನೆ. ಎಲ್ಲವನ್ನೂ ಹೇಳುತ್ತೇನೆ ಎಂದಿದ್ದ ಅವರು, ದೆಹಲಿಗೆ ಆಹ್ವಾನಿಸಿರುವ ಆ ದೊಡ್ಡ ನಾಯಕರ ಹೆಸರನ್ನು ಬಹಿರಂಗಗೊಳಿಸಲಿಲ್ಲ.


ಎರಡು ದಿನಗಳ ಕಾಲ ದೆಹಲಿಯಲ್ಲೆ ವಾಸ್ತವ್ಯ ಹೂಡುವ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ನಾಯಕತ್ವ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟ್ಟು ಹಿಡಿಯಲಿದ್ದಾರೆ ಎಂದು ಹೇಳಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿರುತ್ತಾರೆ ಎಂದು ಪದೇ ಪದೇ ಹೇಳುತ್ತಿರುವ ಸಿದ್ಧರಾಮಯ್ಯ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವ ಸಾಧ್ಯತೆ ಇದ್ದು, ಹೈಕಮಾಂಡ್ ಸೂಚಿಸಿದ್ದರು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕೊಡುವುದನ್ನು ನಿಲ್ಲಿಸುತ್ತಿಲ್ಲ. ಅವರಿಗೆ ಎಚ್ಚರಿಕೆ ನೀಡಿ ಎಂದು ಒತ್ತಾಯಿಸುವ ಸಾಧ್ಯತೆಗಳೂ ಇವೆ.

ಹೈಕಮಾಂಡ್ ಮಾತೆ ಅಂತಿಮ: ಸಿಎಂ ಪುನರುಚ್ಚಾರ


ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಾತೆ ಅಂತಿಮ. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದರು.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಬಗ್ಗೆ ಕದ್ದು ಮುಚ್ಚಿ ಮಾತನಾಡಿಲ್ಲ. ನಾನು ಸಿದ್ದರಾಮಯ್ಯ, ವರಿಷ್ಠರು ಮಾತನಾಡಿದ್ದೇವೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಬಗ್ಗೆ ನಾನು ಮಾತನಾಡಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ.ಹೈಕಮಾಂಡ್ ಮಾತೆ ಅಂತಿಮ ಎಂದರು.


ಬೆಂಗಳೂರಿನಲ್ಲಿಂದು ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಬರುವಂತೆ ನನ್ನನ್ನು ಯಾರು ಕರೆದಿಲ್ಲ. ನಾನು ದೆಹಲಿಗೆ ಹೋಗಲ್ಲ. ನನಗೆ ಕೆಲಸಗಳಿವೆ. ಬಜೆಟ್ ಸಿದ್ಧತೆ ಮಾಡಬೇಕಿದೆ ಎಂದರು.


ದೆಹಲಿಗೆ ಬುಲಾವ್ ಬಂದರೆ ಹೋಗುತ್ತಿರಾ ಎಂಬ ಪ್ರಶ್ನೆಗೆ ಹೈಕಮಾಂಡ್ ಕರೆದರೆ ಹೋಗುತ್ತೇನೆ. ಹೈಕಮಾಂಡ್ ಈಗ ನನ್ನನ್ನು ಕರೆದಿಲ್ಲ. ಅಧಿಕಾರ ಹಂಚಿಕೆ ಸಂಬಂಧಿಸಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲ್ಲ ಎಂದು ಹೇಳಿ, ಹೈಕಮಾಂಡ್ ಮಾತೆ ಅಂತಿಮ ಎಂದರು.


ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸರ್ಕಾರದಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ಧಱಾಮಯ್ಯ ಅವರ ಹಸ್ತಕ್ಷೇಪ ಹೆಚ್ಚಾಗಿದೆ. ವರ್ಗಾವಣೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಅವರು ಕೈಯಾಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತಾಪ್‌ಸಿಂಹಗೆ ಚುನಾವಣೆಯಲ್ಲೇ ಟಿಕೆಟ್ ನೀಡಲಿಲ್ಲ ಎಂದು ವ್ಯಂಗ್ಯವಾಡಿದರು.


ವಿಶೇಷ ಮತ ಪಟ್ಟಿ ಪರಿಷ್ಕರಣೆ(ಎಸ್‌ಐಆರ್)


ಎಸ್‌ಐಆರ್‌ಗೆ ವಿರೋಧಿಸಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಯಾವ ಸಂದರ್ಭದಲ್ಲಿ ಹೇಳಿದೆಯೋ ನನಗೆ ಗೊತ್ತಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.


ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ರಾಜ್ಯ ಹಾಗೂ ದೇಶಕ್ಕೆ ಅವರು ನೀಡಿರುವ ಸೇವೆಯನ್ನು ಸ್ಮರಿಸಿ ಅವರ ಆದರ್ಶಗಳು, ಕೆಲಸಗಳು ನಮಗೆ ಪ್ರೇರಣೆ ಎಂದರು.


ಈ ಸಂದರ್ಭದಲ್ಲಿ ಸಚಿವರಾದ ಬೈರತಿಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಸಲಹೆಗಾರ ನಜೀರ್ ಅಹಮದ್, ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ ರೇಣು ಮತ್ತಿತರರು ಉಪಸ್ಥಿತರಿದ್ದರು.