
ಕಲಬುರಗಿ,ಮಾ.14-ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಇಲ್ಲಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 35 ಸಾವಿರ ರೂ.ದಂಡ ವಿಧಿಸಿದೆ.
ಐನೊಳ್ಳಿ ಗ್ರಾಮದ ಮಹೇಶ ಶಿಕ್ಷೆಗೆ ಗುರಿಯಾದ ಅಪರಾಧಿ.
ತೆಲಂಗಾಣ ರಾಜ್ಯದ ಕರನಕೋಟ ಗ್ರಾಮದ ಪ್ರತಿಭಾಳನ್ನು ಐನೊಳ್ಳಿ ಗ್ರಾಮದ ಮಹೇಶಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಮಾತುಕತೆ ನಿಶ್ಚಯವಾಗಿ ಮಾತುಕತೆಯಲ್ಲಿ ಒಂದು ಬೈಕ್, 11 ತೊಲೆ ಬಂಗಾರ ಹಾಗೂ ತಾಂಡಾದಲ್ಲಿರುವ ಒಂದು ಮನೆ, 5 ಲಕ್ಷ ರೂ.ಹಾಗೂ ಗೃಹ ಬಳಕೆಯ ಸಾಮಾನು ಕೊಡುವ ಮಾತಾಗಿತ್ತು. ಮದುವೆ ಸಮಯದಲ್ಲಿ 11 ತೊಲೆ ಬಂಗಾರ, ಮನೆ, ಬೈಕ್ ಹಾಗೂ ಗೃಹ ಬಳಕೆ ಸಾಮಾನು ನೀಡಲಾಗಿತ್ತು. 5 ಲಕ್ಷ ರೂ.ಗಳನ್ನು ನಂತರ ಕೊಡಲಾಗುವುದು ಎಂದು ಹೇಳಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ಪತ್ನಿಯನ್ನು 3-4 ತಿಂಗಳು ಚೆನ್ನಾಗಿ ನೋಡಿಕೊಂಡ ಮಹೇಶ ನಂತರ ಮದುವೆ ಸಂದರ್ಭದಲ್ಲಿ ಕೊಡಬೇಕಾಗಿದ್ದ 5 ಲಕ್ಷ ಕೊಟ್ಟಿರುವುದಿಲ್ಲ ಎಂದು ಕಿರುಕುಳ ನೀಡಲು ಆರಂಭಿಸಿದ. ಇದೇ ವಿಷಯಕ್ಕೆ ಹೆಚ್ಚಿನ ಕಿರುಕುಳ ನೀಡಲು ಆರಂಭಿಸಿದಾಗ ಪ್ರತಿಭಾ ವಿಷ ಸೇವಿಸಿದಳು. ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪ್ರತಿಭಾ ಮೃತಪಟ್ಟಿದ್ದು, ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೀಠಾಸೀನ ಸೇಡಂ)ದ ನ್ಯಾಯಾಧೀಶ ಕೆ.ಕರಣ್ ಗುಜ್ಜಾರ್ ಅವರು ಆರೋಪಿ ಮಹೇಶಗೆ 7 ವರ್ಷ ಜೈಲು ಶಿಕ್ಷೆ ಹಾಗೂ 35 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ 4ನೇ ಅಪರ ಸರ್ಕಾರಿ ಅಭಿಯೋಜಕರಾದ ಕೆ.ಆರ್.ನಾಗರಾಜ ಮಸ್ಕಿ ಅವರು ವಾದ ಮಂಡಿಸಿದರು.



























