
ಕಲಬುರಗಿ,ಅ.20: ಜೇವರಗಿ ತಾಲೂಕು ನರಿಬೋಳ, ಚಿತಾಪುರ ತಾಲೂಕು ಚಾಮನೂರ ನಡುವಿನ ಭೀಮಾ ನದಿಯ ಸೇತುವೆ ಕೆಲಸ 7 ವರ್ಷಗಳಿಂದ ನಿಂತಲ್ಲೆ ನಿಂತಿದ್ದು,ಗುಣಮಟ್ಟದ ಕಾಮಗಾರಿ ನಡೆಸದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ,ಜಮೀನು ನೀಡಿದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಅ.23 ರಿಂದ ರಾಷ್ಟ್ರೀಯ ಹೆದ್ದಾರಿ ಕಛೇರಿ ಎದುರುಗಡೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ, ಕೆಕೆಆರ್‍ಡಿಬಿ ಅಧ್ಯಕ್ಷರಿಗೆ ಸಂಬಂಧಿಸಿದ ಮತಕ್ಷೇತ್ರದ್ದೇ ಈ ಪರಿಸ್ಥಿತಿಯಾದರೆ ಇನ್ನಿತರ ಕಡೆ ಎಂತಹ ಪರಿಸ್ಥಿತಿ ಇರಬಹುದು ಯೋಚಿಸಲು ಸಾಧ್ಯವಾಗದು ಜನರ ತಾಳ್ಮೆ ಪರೀಕ್ಷಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬಾರದು. ಆದ್ದರಿಂದ ತಕ್ಷಣದಿಂದಲೆ ಜಾರಿಗೆ ಬರುವಂತೆ ಸೇತುವೆ ಕಳಪೆ ಕಾಮಗಾರಿ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಗುತ್ತಿಗೆಕಂಪನಿ ಕುರಿತು ಮೃದು ಧೋರಣೆ ತೋರುತ್ತಿರುವ ಅಧಿಕಾರಿಗಳ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಹೋರಾಟಕ್ಕೆ ಜಿಲ್ಲೆಯ ವಿವಿಧ ಮಠಾಧೀಶರು, ಹೋರಾಟಗಾರರಾದ ಡಾ.ರಾಜು ಕುಳಗೇರಿ, ಲಿಂಗರಾಜ ಸಿರಗಾಪೂರ, ಶಿವಲಿಂಗ ಹಳಿಮನಿ, ಲಕ್ಷ್ಮೀಕಾಂತ ಸ್ವಾದಿ, ಶ್ರವಣಕುಮಾರ ನಾಯಕ್, ನಾಗೆಂದ್ರಪ್ಪಾ ತಾಂಬೆ, ಮಲ್ಲಿಕಾರ್ಜುನ ಸಾರವಾಡ, ಶ್ರೀಕಾಂತ ರಡ್ಡಿ, ಹುಚ್ಚೆಶ್ವರ ವಠಾರ, ಮಹೇಶ ಕೆಂಬಾವಿ.ಸಂದಿಪ್ ಸೇರಿದಂತೆ ಇನ್ನಿತರ ಸಾಮಾಜಿಕ ಕಳಕಳಿಯುಳ್ಳ ವಿವಿದ ಪಕ್ಷದ ಮುಖಂಡರುಗಳು ಬೆಂಬಲ ನೀಡುವ ಭರವಸೆಯನ್ನು ನೀಡಿದ್ದು ಸರ್ಕಾರದ ವಿರುದ್ಧ ಕಹಳೆ ಮೊಳಗಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ