
ಬೆಂಗಳೂರು, ಮಾ. ೧೭- ಹುಬ್ಬಳ್ಳಿ ಧಾರವಾಡ ಮತ್ತು ಬೆಳಗಾವಿಯನ್ನು ಐಟಿ ಹಬ್ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಬೆಳಗಾವಿಯಲ್ಲಿ ತಂತ್ರಜ್ಞಾನ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆಯ ಸಂಬಂಧ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಅಭಯ ಪಾಟೀಲ್ ರವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಳಗಾವಿಯಲ್ಲಿ ಸುಮಾರು ೭೫೦ ಎಕರೆ ಪ್ರದೇಶದಲ್ಲಿ ಐಟಿ-ಬಿಟಿ ಪಾರ್ಕ್, ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಬೆಳಗಾವಿಗೆ ಸಂಬಂಧಿಸಿದಂತೆ ನೀಲನಕ್ಷೆಯನ್ನು ಸಿದ್ದಪಡಿಸುತ್ತೇವೆ. ಬೆಳಗಾವಿ ಲೋಕಲ್ ಚೇಂಬರ್ ಆಫ್ ಕಾಮರ್ಸ್ ಮತ್ತು ಬೆಟ್ಕಾ ಜತೆ ಚರ್ಚಿಸಿ ನೀಲನಕ್ಷೆಯನ್ನು ಸಿದ್ದಪಡಿಸುತ್ತೇವೆ. ಬೆಳಗಾವಿಯನ್ನು ಟ್ಯಾಲೆಂಟ್ ಹಬ್ ಆಗಿಯೂ ರೂಪಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ಉಪಕರಣ ಉತ್ಪಾದನೆಗೆ ಉತ್ತಮವಾಗಿದೆ. ಹಾಗಾಗಿ ಲೀಪ್ ಯೋಜನೆಯಡಿಯೂ ಬೆಳಗಾವಿಯನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಲ್ಲಿ ಉತ್ಪಾದನೆ ಮತ್ತು ಜಿಟಿಟಿಸಿ ಕೇಂದ್ರಗಳ ಸ್ಥಾಪನೆಗೂ ವಿಫುಲ ಅವಕಾಶ ಇದೆ. ನಮಗೆ ಹಣದ ಕೊರತೆ ಇಲ್ಲ. ಹುಬ್ಬಳ್ಳಿ-ಧಾರವಾಡ, ಬೆಳಗಾವಿಯನ್ನು ಐಟಿ ಹಬ್ ಆಗಿ ರೂಪಿಸಲಾಗುವುದು ಎಂದರು.
ಧಾರವಾಡದ ಐಐಟಿಯಲ್ಲಿ ಎ.ಐ. ಕೋರ್ಸ್‌ನ್ನು ಆರಂಭಿಸಲಾಗಿದೆ. ಹಾಗೆಯೇ ಧಾರವಾಡದಲ್ಲಿ ಕ್ವಾಟಮ್ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿಯ ತಿಲಕವಾಡಿಯಲ್ಲಿರುವ ಕಲಾಮಂದಿರದ ಕೊಠಡಿಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದೊಂದಿಗೆ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲು ಈ ಕಟ್ಟಡವನ್ನು ಐಟಿ ಇಲಾಖೆಗೆ ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.
ಬೆಳಗಾವಿಯಲ್ಲಿ ಐಟಿ ಪಾರ್ಕ್, ಸೆಮಿಕಂಡಕ್ಟರ್ ಪಾರ್ಕ್‌ಗೆ ಸಂಬಂಧಿಸಿದಂತೆ ಗುರುತಿಸಲಾಗಿದ್ದ ೭೫೦ ಎಕರೆ ಭೂಮಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ಸೇನೆಯ ಉಪಯೋಗಕ್ಕೆ ನೀಡಲಾಗಿದ್ದ ಜಮೀನು ಆಗಿದ್ದು, ಈ ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸುವಂತೆ ಆದೇಶಿಸಲಾಗಿದೆ. ಆದರೆ ರಕ್ಷಣಾ ಇಲಾಖೆಯು ಜಮೀನನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಲು ಕ್ರಮ ಕೈಗೊಂಡಿಲ್ಲ. ೧೩-೦೨-೨೦೨೧ ರಂದು ಅಂದಿನ ಐಟಿ-ಬಿಟಿ ಸಚಿವರು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ ಜಮೀನು ಹಿಂದಿರುಗಿಸಲು ಕೋರಿರುತ್ತಾರೆ. ಇದುವರೆಗೂ ಜಮೀನು ಹಸ್ತಾಂತರವಾಗಿಲ್ಲ ಎಂದು ಅವರು ತಿಳಿಸಿದರು.
ಈ ಸಂಬಂಧ ೨೦೨೧ ರಲ್ಲಿ ಅಂದಿನ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೂ ಇನ್ನು ರಕ್ಷಣಾ ಇಲಾಖೆ ಜಮೀನನ್ನು ನೀಡಿಲ್ಲ ಎಂದು ಅವರು ಹೇಳಿದರು.






























