ಸಾಹಿತಿ ಭೈರಪ್ಪ ನಿಧನಕ್ಕೆ ಹೊಯ್ಸಳ ಕರ್ನಾಟಕ ಸಂಘ ಸಂತಾಪ

ತುಮಕೂರು, ಅ. ೬- ಸಾಹಿತ್ಯ, ತತ್ವಶಾಸ್ತ್ರ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಎಸ್.ಎಲ್. ಭೈರಪ್ಪ ಅವರು, ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲೂ ಪ್ರಸಿದ್ಧಿಗೆ ತಂದಿದ್ದರು ಎಂದು ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಹೆಚ್. ಹಿರಿಯಣ್ಣ ಅಭಿಪ್ರಾಯಪಟ್ಟರು.


ನಗರದ ಎಸ್.ಎಸ್.ಪುರಂನಲ್ಲಿರುವ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಕಚೇರಿಯಲ್ಲಿ ಇತ್ತೀಚಿಗೆ ನಿಧನರಾದ ಖ್ಯಾತ ಸಾಹಿತಿಗಳೂ ಹಾಗೂ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪ ಸಂತಾಪ ಸಭೆಯಲ್ಲಿ ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.


ಹೊಯ್ಸಳ ಕರ್ನಾಟಕ ಪಂಗಡಕ್ಕೆ ಸೇರಿದ ಭೈರಪ್ಪ ಅವರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ೫ನೇ ಸಮಾವೇಶಕ್ಕೆ ಅತಿಥಿಗಳಾಗಿ ಆಗಮಿಸಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸೂಕ್ತ ಸಲಹೆಗಳನ್ನೂ ನೀಡಿದ್ದರು ಎಂದು ನೆನಪಿಸಿಕೊಂಡರು.


ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ರಾಮಮೂರ್ತಿ ಮಾತನಾಡಿ, ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದ ಎಸ್.ಎಲ್. ಭೈರಪ್ಪರವರು, ಹೊಯ್ಸಳ ಕರ್ನಾಟಕ ಸಂಘದ ಶ್ರೇಯೋಭಿವೃದ್ಧಿಗೆ ಅತ್ಯಮೂಲ್ಯ ಸಲಹೆ ನೀಡುತ್ತಿದ್ದರು ಎಂದು ಸ್ಮರಿಸಿದರು.


ಸಭೆಯಲ್ಲಿ ಪದಾಧಿಕಾರಿಗಳಾದ ಎಸ್.ಶ್ರೀನಿವಾಸ್, ಸುಮಾ, ಭಾಸ್ಕರ್, ಶಿವು, ರವೀಂದ್ರಮೂರ್ತಿ, ಸಿ.ಎನ್.ರಮೇಶ್, ಹೆಚ್.ಎಸ್.ರಾಘವೇಂದ್ರ, ಶ್ರೀನಿವಾಸಮೂರ್ತಿ, ನಾಗೇಶ್ ಮತ್ತಿತರ ಮುಖಂಡರುಗಳು ಪಾಲ್ಗೊಂಡಿದ್ದರು.