ಚಿಕನ್ ಬಿರಿಯಾನಿ ಮಾಡುವ ವಿಧಾನ

ಮೊಗಲರು ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. ’ಬಿರಿಯಾನಿ’ ಎಂಬ ಪದವು ಪರ್ಷಿಯನ್ ಪದವಾದಬಿರಿಯನ್ ನಿಂದ ಬಂದಿದೆ. ಇದು ದಕ್ಷಿಣ ಏಷ್ಯಾದಲ್ಲಿಬಹಳ ಜನಪ್ರಿಯವಾದ ಖಾದ್ಯವಾಗಿದೆ. ಭಾರತದ ಎಲ್ಲಾ ಕಡೆಯಲ್ಲೂ ಈ ಖಾದ್ಯವನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿಯು ಪ್ರಧಾನ ಆಹಾರವಾಗಿದ್ದುದರಿಂದ ತೆಲಂಗಾಣ, ತಮಿಳು ನಾಡು, ಕೇರಳ ಮತ್ತು ಕರ್ನಾಟಕದಲ್ಲಿ ವಿಭಿನ್ನ ರೀತಿಯ ಬಿರಿಯಾನಿಗಳನ್ನು ಮಾಡುತ್ತಿದ್ದರು. [೪] ಬಿರಿಯಾನಿಗಳಲ್ಲಿ ಅನೇಕ ರೀತಿಯ ವಿಧಗಳಿವೆ. ಸಾಮಾನ್ಯವಾಗಿ ಆಯಾ ಪ್ರದೇಶದ ಹೆಸರಿನೊಂದಿಗೆ ಕರೆಯುತ್ತಾರೆ.

ಬೇಕಾಗುವ ಸಾಮಗ್ರಿಗಳು

೬೦೦ಗ್ರಾಂ ಬಾಸುಮತಿ ಅಕ್ಕಿ (ಸ್ವಲ್ಪ ಉಪ್ಪು ಹಾಕಿ ಬೇಯಿಸಿ), ೪ ಚಮಚ ಪುದೀನಾ ಪೇಸ್ಟ್, ರುಚಿಗೆ ತಕ್ಕ ಉಪ್ಪು, ೨ ಚಮಚ ಕೊತ್ತಂಬರಿ ಪುಡಿ, ೧ ಚಮಚ ಬೆಳ್ಳುಳ್ಳಿ ಪೇಸ್ಟ್,೨ ಸೌಟು ಟೊಮೆಟೊ ಪೇಸ್ಟ್,ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ೪-೫, (ಅರ್ಧ ಈರುಳ್ಳಿಯನ್ನು ಚಿಕನ್ ಮಾಡುವಾಗ ಹಾಕಿ ಉಳಿದ ಈರುಳ್ಳಿಯನ್ನು ತುಪ್ಪದಲ್ಲಿ ಪ್ರೈ ಮಾಡಿ ಇಡಿ), ೫-೬ ಏಲಕ್ಕಿ, ಅರ್ಧ ಚಮಚ ಖಾರದ ಪುಡಿ, ೧/೨ ಲೀಟರ್ ಮೊಸರು, ೧ ಕೆಜಿ ಚಿಕನ್ ಲೆಗ್ ಪೀಸ್, ೧ ಚಮಚ ಗರಂ ಮಸಾಲ, ಚಿಟಿಕೆಯಷ್ಟು ಕೇಸರಿ, ೧ ಚಮಚ ಶುಂಠಿ ಪೇಸ್ಟ್, ೪ ಹಸಿ ಮೆಣಸಿನಕಾಯಿ (ಕತ್ತರಿಸಿದ್ದು), ೩ ಟೊಮೆಟೊ, ೨ ಚಮಚ ಜೀರಿಗೆ, ೧ ಚಮಚ ಅರಿಶಿಣ, ೧ ಚಮಚ ಹಾಲು, ಎಣ್ಣೆ ೨ ಚಮಚ ಮಾಡುವ ವಿಧಾನ:ಒಂದು ಬೌಲ್‌ಗೆ ಮೊಸರು, ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ಈಗ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ. ಕೇಸರಿಯನ್ನು ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆ ಹಾಕಿ. ನಂತರ ತಳ ದಪ್ಪವಿರುವ ಪಾತ್ರೆಗೆ ೨ ಚಮಚ ಎಣ್ಣೆ ಹಾಕಿ, ಸಾಧಾರಣ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಏಲಕ್ಕಿ ಹಾಕಿ, ಜೀರಿಗೆ ಚಟ್ ಪಟ್ ಅಂತ ಶಬ್ದ ಬಂದ ಮೇಲೆ ಈರುಳ್ಳಿ ಹಾಕಿ ೧೫ ನಿಮಿಷ ಪ್ರೈ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಟೊಮೆಟೊ ಹಾಕಿ, ನಂತರ ಟೊಮೆಟೊ ಪೇಸ್ಟ್ ಹಾಕಿ ೫ ನಿಮಿಷ ಪ್ರೈ ಮಾಡಿ.

ಈಗ ಕತ್ತರಿಸಿದ ಹಸಿ ಮೆಣಸು ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ೨ ನಿಮಿಷ ಪ್ರೈ ಮಾಡಿ, ಈಗ ಕೊತ್ತಂಬರಿ ಪುಡಿ ಹಾಕಿ ೨ ನಿಮಿಷ ಪ್ರೈ ಮಾಡಿ, ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಚಿಕನ್ ಬೇಯುವವರೆಗೆ ಆಗಾಗ ಸೌಟ್‌ನಿಂದ ಮೆಲ್ಲನೆ ಆಡಿಸಿ. ಚಿಕನ್ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ.

ಈಗ ಚಿಕನ್ ಅನ್ನ ಒಂದು ಪಾತ್ರೆಗೆ ಹಾಕಿ, ಚಿಕನ್ ಮಾಡಿದ ಪಾತೆ-ಗೆ ಮೊದಲು ಸ್ವಲ್ಪ ಚಿಕನ್ ಹಾಕಿ ನಂತರ ಅನ್ನ ಹಾಕಿ ಅದರ ಮೇಲೆ ಕೇಸರಿ, ಗರಂ ಮಸಾಲ, ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಮತ್ತೆ ಸ್ವಲ್ಪ ಚಿಕನ್ ಹಾಕಿ ನಂತರ ಅನ್ನ ಹಾಕಿ, ಈ ರೀತಿ ಪದರ-ಪದರವಾಗಿ ಚಿಕನ್ ಹಾಗೂ ಅನ್ನ ಹಾಕಿ ಮೇಲ್ಬಾಗದಲ್ಲಿ ತುಪ್ಪದಲ್ಲಿ ಪ್ರೈ ಮಾಡಿದ ಈರುಳ್ಳಿ ಹಾಕಿ ಕಡಿಮೆ ಉರಿಯಲ್ಲಿ ೧೦ ನಿಮಿಷ ಬೇಯಿಸಿ, ನಂತರ ಮಿಕ್ಸ್ ಮಾಡಿ.

ರೆಡಿಯಾದ ಬಿರಿಯಾನಿಯನ್ನು ಮೊಸರು ಬಜ್ಜಿ ಜತೆ ಸರ್ವ್ ಮಾಡಿ.