
ಸಿಎಂ ಪ್ರಶ್ನೆ
ಮೈಸೂರು, ಸೆ. ೧೩- ಅಪಘಾತಗಳನ್ನು ತಡೆಯಲೆಂದೇ ರಸ್ತೆ ಸುರಕ್ಷತಾ ಕಾನೂನುಗಳನ್ನು ಮಾಡಲಾಗಿದೆ. ಆದರೂ ಚಾಲಕರು ತಪ್ಪುಗಳಿಂದ ಅಪಘಾತಗಳು ಸಂಭವಿಸಿದರೆ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಕ್ಯಾಂಟರ್ ನುಗ್ಗಿ ೯ ಜನ ಮೃತಪಟ್ಟಿದ್ದಾರೆ. ಇದು ಚಾಲಕನ ತಪ್ಪಿನಿಂದಾದ ಅಪಘಾತ. ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದರು.
ಮೃತರ ಕುಟುಂಬಕ್ಕೆ ನಮ್ಮ ಸಂತಾಪ ಇದೆ. ಘಟನೆ ತಿಳಿಯುತ್ತಿದ್ದಂತೆಯೇ ನಾನು, ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಸ್ಥಳಕ್ಕೆ ತೆರಳುವಂತೆ ಸೂಚನೆ ಕೊಟ್ಟೆ. ಅವರು ಹಾಸನಕ್ಕೆ ತೆರಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಹಾಗೆಯೇ ೫ ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ ಎಂದರು.
ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂಬ ಬಿಜೆಪಿ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಪರಿಹಾರ ಕೊಟ್ಟಿದ್ದರು.
ಪರಿಹಾರ ಕೊಡುವುದು ಮೃತರನ್ನು ವಾಪಸ್ ಕರೆತರುತ್ತೇವೆ ಎಂದಲ್ಲ. ಮೊದಲಿನಿಂದಲೂ ಪರಿಹಾರ ಕೊಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದವರು ಅನ್ನುವ ಕಾರಣಕ್ಕೆ ಮತ್ತು ಸಾಂತ್ವನ ಹೇಳುವ ಉದ್ದೇಶದಿಂದ ಪರಿಹಾರ ಕೊಡಲಾಗುತ್ತಿದೆಯೇ ಹೊರತು ಸಾವಿಗೆ ಸಮಾನ ಎಂದಲ್ಲ ಎಂದು ಹೇಳಿ, ವಿಶೇಷ ಪ್ರಕರಣವೆಂದು ಹೆಚ್ಚಿನ ಪ್ರಕರಣ ಕೊಡಲು ಆಗಲ್ಲ ಎಂದರು.
ಶಾಸಕರ ವಿರುದ್ಧ ಎಫ್‌ಐಆರ್ ರಾಜಕೀಯವಿಲ್ಲ
ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿಯ ಶಾಸಕ ಸಿ.ಟಿ. ರವಿ, ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದರಲ್ಲಿ ರಾಜಕೀಯವಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡಿ ಪ್ರಚೋದನಾಕಾರಿ ಭಾಷಣ ಮಾಡಿದವರನ್ನು ಸುಮ್ಮನೆ ಬಿಡಬೇಕ ಎಂದು ಪ್ರಶ್ನಿಸಿದರು.
ಹಿಂದೂಗಳನ್ನು ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಸರಿಯಲ್ಲ. ನಾನು ಕೂಡಾ ಹಿಂದು. ನನ್ನ ಹೆಸರಲ್ಲೇ ೨ ದೇವರು ಇವೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು. ಪ್ರಚೋದನಾಕಾರಿ ಭಾಷಣ ಮಾಡಿ ಸಮಾಜದ ಶಾಂತಿಗೆ ಭಂಗ ತಂದವರ ವಿರುದ್ಧ ಕ್ರಮ ಕೈಗೊಳ್ಳುವುದು ತಪ್ಪಲ್ಲ. ಇದರಲ್ಲಿ ರಾಜಕೀಯ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.
ಜಾತಿ ಗಣತಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮತಾಂತರ ಆದವರನ್ನು ಆ ಜಾತಿಗೆ ಸೇರ್ಪಡೆ ಮಾಡುವುದರಲ್ಲಿ ತಪ್ಪೇನಿಲ್ಲ. ಮತಾಂತರಕ್ಕೆ ನನ್ನ ಬೆಂಬಲ ಇಲ್ಲ. ಆದರೆ ಮತಾಂತರ ಆಗುವುದು ಅವರ ಹಕ್ಕು. ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪೃಶ್ಯತೆಯಿಂದ ಕೆಲವರು ಮತಾಂತರ ಆಗುತ್ತಾರೆ. ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮಗಳಲ್ಲೂ ಅಸಮಾನತೆ ಇದೆ. ಅಸಮಾನತೆ ಒಂದೇ ಧರ್ಮಕ್ಕೆ ಸೀಮಿತವಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರೆಲ್ಲಾ ಕ್ರೈಸ್ತರೇ ಎಂದು ಸ್ಪಷ್ಟಪಡಿಸಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರವರನ್ನು ಆಹ್ವಾನಿಸಿರುವುದಕ್ಕೆ ಕಾನೂನು ಹೋರಾಟ ನಡೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಹೋರಾಟ ನಡೆಯಲಿ, ಅದನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ. ದಸರಾ ಎಲ್ಲರ ಹಬ್ಬ. ಒಂದು ಜಾತಿ, ಧರ್ಮಕ್ಕೆ ಸೇರಿದ ಹಬ್ಬ ಅಲ್ಲ. ರಾಜಕೀಯ ಕಾರಣಕ್ಕೆ ಈ ರೀತಿ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ದಸರಾ ಮುಗಿಯುವವರೆಗೂ ಗಡಿಪಾರು ಮಾಡಬೇಕು ಎಂಬ ಕೆಲ ಸಂಘಟನೆಗಳ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರವನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಶಾಂತಿಗೆ ಯಾರೇ ಭಂಗ ತಂದರೂ ಆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಅನಗತ್ಯ ವಿಳಂಬ ಸಲ್ಲದು. ತನಿಖೆಯಲ್ಲಿ ನಾವು ಮಧ್ಯೆ ಪ್ರವೇಶಿಸಲ್ಲ ಎಂದು ಅವರು ಹೇಳಿದರು.
ಮೇಕೆದಾಟು, ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿ ಎಲ್ಲವನ್ನು ಸರಿಪಡಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಗಲಾಟೆ, ಹಿಂಸೆಯಾದಾಗ ಮೋದಿ ಹೋಗಲಿಲ್ಲ. ಈಗ ಅಲ್ಲಿಗೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.