ಪೊಲೀಸ್ ಕ್ವಾಟರ್ಸ್‍ನಲ್ಲಿಯೇ ಮನೆ ಕಳವು:ಹೆಡ್ ಕಾನ್ಸಸ್ಟೇಬಲ್ ಮನೆ ಬೀಗ ಮುರಿದು 1 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ

ಕಲಬುರಗಿ,ಅ.7-ನಗರ ಹೊರವಲಯದ ತಾಜ್‍ಸುಲ್ತಾನಪುರದಲ್ಲಿರುವ ಕೆಎಸ್‍ಆರ್‍ಪಿ ಕ್ವಾಟರ್ಸ್‍ನಲ್ಲಿನ ಹೆಡ್ ಕಾನ್ಸ್‍ಸ್ಟೇಬಲ್ ಅವರ ಮನೆ ಮನೆ ಬೀಗ ಮುರಿದು 74 ಸಾವಿರ ರೂ.ಮೌಲ್ಯದ 9 ಗ್ರಾಂ.ಬಂಗಾರದ ಕಿವಿಯೋಲೆ, 26 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯೋಲೆ ಸೇರಿ 1 ಲಕ್ಷ ರೂ.ಮೌಲ್ಯದ 12 ಗ್ರಾಂ.ಚಿನ್ನಾಭರಣ ಕಳವು ಮಾಡಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಕೆಎಸ್‍ಆರ್‍ಪಿ ಪಡೆಯಲ್ಲಿ ಹೆಡ್ ಕಾನ್ಸ್‍ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಮಹಾಂತೇಶ ಪವಾರ್ ಎಂಬುವವರ ವಸತಿ ಗೃಹದ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಲಾಗಿದೆ.
ಇವರು ತಿರುಪತಿಗೆ ಹೋಗಲೆಂದು ಬೆಂಗಳೂರಿನಿಂದ ತಾಜ್ ಸುಲ್ತಾನಪುರಕ್ಕೆ ಆಗಮಿಸಿ ಕುಟುಂಬ ಸಮೇತ ತಿರುಪತಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಆ ನಂತರ ಸುರಪುರ ತಾಲ್ಲೂಕಿನಲ್ಲಿರುವ ತಮ್ಮ ಊರಾದ ಗಡ್ಡದ ತಾಂಡಾಕ್ಕೆ ತೆರಳಿದ್ದಾರೆ. ಮರಳಿ ತಾಜ್ ಸುಲ್ತಾನಪುರದಲ್ಲಿರುವ ವಸತಿ ಗೃಹಕ್ಕೆ ಬಂದು ನೋಡಿದಾಗ ಮನೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.