
ಮುಂಬೈ,ಮಾ.೬-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಮಾಜ್ ಮಾಡಲು ಅನುಮತಿ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದನ್ನು ಧಾರ್ಮಿಕ ಹಕ್ಕು ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.ಛಿನ್ಯಾಯಮೂರ್ತಿಗಳಾದ ಬಿಪಿ ಕೊಲಬಾವಾಲಾ ಮತ್ತು ಫಿರ್ದೌಸ್ ಪೂನಿವಾಲಾ ಅವರ ಪೀಠವು ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದು, ವಿಮಾನ ನಿಲ್ದಾಣದ ಬಳಿ ಪ್ರಾರ್ಥನೆ ಸಲ್ಲಿಸಲು ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಕಳೆದ ವರ್ಷ ಅಧಿಕಾರಿಗಳು ತೆಗೆದುಹಾಕಿದ್ದಾರೆ ಎನ್ನುವ ಆರೋಪದ ವಿಚಾರಣೆ ನಡೆಸುತ್ತಿದ್ದರು.
ಅರ್ಜಿಯಲ್ಲಿ, ಚಾಲಕರು ಅದೇ ಸ್ಥಳದಲ್ಲಿ ಅಥವಾ ಹತ್ತಿರದ ಯಾವುದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿದ್ದರು. ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರಿಗೆ ಪರ್ಯಾಯ ಸ್ಥಳ ನೀಡಬಹುದೇ ಎಂದು ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚಿಸಿತ್ತು. ಗುರುವಾರ ಸಲ್ಲಿಸಿದ ವರದಿಯಲ್ಲಿ, ಏಳು ಸ್ಥಳಗಳನ್ನು ಸಮೀಕ್ಷೆ ಮಾಡಲಾಗಿದೆ, ಆದರೆ ಜನದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಿಂದಾಗಿ ಯಾವುದೂ ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯನ್ನು ನೋಡಿದ ನಂತರ, ಹೈಕೋರ್ಟ್ ವಿಮಾನ ನಿಲ್ದಾಣದ ಸುತ್ತಲೂ ಪ್ರಾರ್ಥನೆ ಸಲ್ಲಿಸಲು ಯಾವುದೇ ಸ್ಥಳವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅದು ಧರ್ಮವಾಗಲಿ ಅಥವಾ ಇನ್ನೇನೇ ಆಗಿರಲಿ, ಭದ್ರತೆ ಮೊದಲು. ಪ್ರತಿಯೊಂದು ಧರ್ಮದ ಜನರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ, ಆದ್ದರಿಂದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿದಾರರು ಯಾವ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂದು ಸ್ವತಃ ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾರಾದರೂ ಒತ್ತಾಯಿಸಿದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಉದಾಹರಣೆ ಸಮೇತ ತೀರ್ಪು ನೀಡಿದೆ.
ಅರ್ಜಿದಾರರು ಬೇರೆ ಸ್ಥಳವನ್ನು ಹುಡುಕಬೇಕೆಂದು ನ್ಯಾಯಾಲಯ ಹೇಳಿದೆ. ಸಂಬಂಧಪಟ್ಟ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮದರಸಾ ಇದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.


























