Home ಜಿಲ್ಲೆ ಕಲಬುರಗಿ ರಸ್ತೆ ಮೇಲೆ ಕಸದ ರಾಶಿ: ಸಾರ್ವಜನಿಕರ ಅಕ್ರೋಶ

ರಸ್ತೆ ಮೇಲೆ ಕಸದ ರಾಶಿ: ಸಾರ್ವಜನಿಕರ ಅಕ್ರೋಶ

ಕಲಬುರಗಿ,ಮಾ.22- ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ವಿದ್ಯಾನಗರ ಬಡಾವಣೆ ಸಂಜೆವಾಣಿ ದಿನಪತ್ರಿಕೆಯ ಕಾರ್ಯಾಲಯದ ಎದುರಿನ ರಸ್ತೆಯ ಮೇಲೆ ಕಸದ ರಾಶಿ ಹಾಕಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಇಲ್ಲಿನ ರಸ್ತೆ ಬದಿಯಲ್ಲಿ ಹಾಕಲಾದ ಕಸವನ್ನು ತೆರವು ಗೊಳಿಸದ ಹಿನ್ನಲೆಯಲ್ಲಿ ಕಬ್ಬೆದ್ದು ನಾರುವಂತಾಗಿದೆ, ರಸ್ತೆಬದಿಯಲ್ಲಿ ಸುರಿಯಲಾಗುತ್ತಿದ್ದ ಕಸವನ್ನು ರಸ್ತೆಯ ಮೇಲೆಯೂ ಸುರಿಯಲಾಗುತ್ತಿದೆ.
ಇಲ್ಲಿನ ಒಳಚರಂಡಿ ಬ್ಲಾಕ್ ಆಗಿ ಚರಂಡಿಯ ಕೊಳಕು ನೀರು ರಸ್ತೆಮೇಲೆ ಹರಿಯುತ್ತಿದೆ. ಪದೇಪದೇ ಇಲ್ಲಿನ ಒಳಚರಂಡಿ ಪೈಪ್‍ಲೈನ್ ಬ್ಲಾಕ್ ಆಗುತ್ತಿರುತ್ತದೆ ಎಂಬ ಆರೋಪ ನಾಗರಿಕರಿಂದ ಕೇಳಿ ಬರುತ್ತಿದೆ. ರಸ್ತೆಯ ಮೇಲೆ ಕಸಗಳ ರಾಶಿ ಮತ್ತು ಚರಂಡಿ ನೀರು… ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಸಕಾಲದಲ್ಲಿ ಇಲ್ಲಿನ ಕಸವಿಲೇವಾರಿ ಮಾಡದೇ ಇರುವುದರಿಂದಾಗಿ ಇಲ್ಲಿ ರಾಶಿರಾಶಿ ಕಸವ ಸಂಗ್ರವಾಗಿದ್ದು, ಅದು ರಸ್ತೆಯ ಮೇಲೆಯೂ ಹರಡುವಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಇಲ್ಲಿನ ಕಸದರಾಶಿ ಅಡ್ಡಿಯಾಗುತ್ತಿದೆ. ಅಕ್ಕಪಕ್ಕದವರೂ ಸೇರಿದಂತೆ ಇಲ್ಲಿ ಓಡಾಡುವ ಪಾದಚಾರಿಗಳಿಗೂ ದುರ್ವಾಸನೆಯ ನರಕದ ಯಾತನೆಯ ಅನುಭವ ನೀಡುತ್ತಿದೆ.
ಯಾವುದೇ ಬಯಲು ಜಾಗಗಳಲ್ಲಿ ಕಸವನ್ನು ಹಾಕಲು ಅವಕಾಶ ಇರುವುದಿಲ್ಲ, ಈ ಬಡಾವಣೆಯ ನಾಗರಿಕರು ನಮ್ಮ ಮನೆಗಳಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ತಾಜ್ಯವನ್ನು ಹಾಕಬೇಕು, ಇಲ್ಲಿನ ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ತಪ್ಪಿಸಲು ಪಾಲಿಕೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲಿ ಬಿದ್ದಿರುವ ರಾಶಿರಾಶಿ ಕಸವನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ತುಂಬಿ ಹರಿಯುವ ಒಳ ಚರಂಡಿನೀರಿನ ಸೋರಿಕೆ ದುರಸ್ತಿಗೊಳಿಸಬೇಕು ಎಂದು ಸ್ವಚ್ಛತಾಪ್ರೇಮಿಗಳು ಒತ್ತಾಯಿಸಿದ್ದಾರೆ.